ಪುಟ:ರಂಗಣ್ಣನ ಕನಸಿನ ದಿನಗಳು.pdf/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩೨

ರಂಗಣ್ಣನ ಕನಸಿನ ದಿನಗಳು

ಕೆಳಗೆ ಎಲ್ಲರೂ ಕುಳಿತರು. ರಂಗಣ್ಣನೂ ಶಂಕರಪ್ಪನೂ ಗರುಡನ ಹಳ್ಳಿಯ ಕಡೆಗೆ ಹೊರಟರು. ಆಗ ಶ್ಯಾನುಭೋಗನು,

'ಸ್ವಾಮಿ ! ಗರುಡನ ಹಳ್ಳಿಯವರು ಬಹಳ ಪುಂಡರು. ಹಿಂದಿನ ಇನ್ ಸ್ಪೆಕ್ಟರನ್ನು ಹೀನಾಮಾನ ಬೈದರು ; ಹೊಡೆಯುವುದಕ್ಕೂ ಕೈಯೆತ್ತಿದರು, ಆದರೆ ಆ ಪ್ರಸಂಗ ನಮ್ಮ ಹಳ್ಳಿಯಲ್ಲಿ ನಡೆಯಿತು. ನಾವು ಇನ್ ಸ್ಪೆಕ್ಟರನ್ನು ರಕ್ಷಿಸಿದೆವು. ಈಗ ನೀವು ಬೆಂಬಲವಿಲ್ಲದೆ ಗರುಡನಹಳ್ಳಿಗೆ ಹೋಗುತ್ತೀರಿ, ಆಲೋಚನೆಮಾಡಿ ಸ್ವಾಮಿ ! ಬೇಕಾದರೆ ತಳವಾರನ ಕೈಯಲ್ಲಿ ಹೇಳಿ ಕಳಿಸೋಣ'-ಎಂದನು.

'ಶ್ಯಾನುಭೋಗರೆ ! ಅವರು ಹೊಡೆದರೆ ಹೊಡೆಸಿಕೊಂಡು ಬರುತ್ತೇನೆ! ನಾನೀಗ ಏನು ಮಾಡಬೇಕು? ನೀವುಗಳಾರೂ ನನ್ನ ಬೆಂಬಲಕ್ಕೆ ಬರುವುದಿಲ್ಲ. ತಮಾಷೆ ನೋಡೋಣವೆಂದು ಅಲ್ಲೇ ಕುಳಿತಿದ್ದೀರಿ. ತಳವಾರನನ್ನು ಕಳಿಸಿದರೆ ಅವರು ಬರುತ್ತಾರೆಯೆ ? ನಾನು ಹೋದರೂ ಏನು ಮಾಡುತ್ತಾರೋ ಗೊತ್ತಿಲ್ಲ. ಪ್ರಯತ್ನ ಪಟ್ಟು ನೋಡುತ್ತೇನೆ'- ಎಂದು ಹೇಳುತ್ತಾ ರಂಗಣ್ಣ ಹೊರಟನು. ಪಂಚಾಯತಿ ಮೆಂಬರುಗಳು ಒಂದೆರಡು ನಿಮಿಷ ತಂತಮ್ಮ ಆಲೋಚನೆ ಮಾಡಿಕೊಂಡು, ಕಡೆಗೆ ಇನ್ ಸ್ಪೆಕ್ಟರ ಬೆಂಬಲಕ್ಕೆ ನಾಲ್ಕು ಜನ ಆಳುಗಳನ್ನು ಕಳಿಸಿಕೊಟ್ಟರು.

ರಂಗಣ್ಣ ಗರುಡನ ಹಳ್ಳಿಯ ಪಂಚಾಯತಿ ಹಾಲನ್ನು ಪ್ರವೇಶಿಸಿದಾಗ ಸ್ಕೂಲು ನಡೆಯುತ್ತಿತ್ತು. ಮಕ್ಕಳು ಎದ್ದು ನಿಂತುಕೊಂಡು ನಮಸ್ಕಾರ ಮಾಡಿದರು. ಮೇಷ್ಟು ಕೈ ಮುಗಿದು ದೂರದಲ್ಲಿ ನಿಂತುಕೊಂಡನು.

'ಮೇಷ್ಟೆ ! ಚೇರ್ಮನ್ನರನ್ನೂ ಪಂಚಾಯತಿಯ ಮೆಂಬರುಗಳನ್ನೂ ಇಲ್ಲಿಗೆ ಕರೆಸಿ ಎಂದು ರಂಗಣ್ಣ ಹೇಳಿದನು. ಮೇಷ್ಟ್ರು ತಾನೇ ಹೋಗಿ ಅವರನ್ನು ಕರೆದುಕೊಂಡು ಬಂದನು. ಚೇರ್ಮನ್ನು ಒಳ್ಳೆಯ ಭಾರಿ ಆಳು ; ಮುರಿಬಾಸೆ, ಆಗಲವಾದ ಹಣೆ. ಮೆಂಬರುಗಳು ಸಾಮಾನ್ಯವಾಗಿದ್ದರು, ಮಕ್ಕಳನ್ನೆಲ್ಲ ಆಟಕ್ಕೆ ಬಿಟ್ಟು ರಂಗಣ್ಣ ಅವರೊಡನೆ ಮಾತಿಗಾರಂಭಿಸಿದನು.