ಪುಟ:ರಂಗಣ್ಣನ ಕನಸಿನ ದಿನಗಳು.pdf/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿ

೨೩೩

'ನೀವೆಲ್ಲ ಒಂದೇ ಪಂಚಾಯತಿ ತಾಯಿಗೆ ಸೇರಿದ ಮಕ್ಕಳು. ಅಣ್ಣ ತಮ್ಮಂದಿರಂತೆ ಇದ್ದವರು. ಹಾಳು ಈ ಒಂದು ಗ್ರಾಂಟು ಸ್ಕೂಲಿಗೋಸ್ಕರ ವ್ಯಾಜ್ಯ ಕಾದು ಒಬ್ಬರ ಮನೆಗೆ ಮತ್ತೊಬ್ಬರು ಕಾಲಿಕ್ಕದಷ್ಟು ವೈರ ಬೆಳಸಿಕೊಂಡಿದ್ದಿರಿ. ಏಕೋ ಚೆನ್ನಾಗಿ ಕಾಣುತ್ತಾ ಇಲ್ಲ !'

'ಸ್ವಾಮಿ ನಾವು ನ್ಯಾಯ ಬಿಟ್ಟು ಹೋಗೋದಿಲ್ಲ. ಇಸ್ಕೂಲು ಇಲ್ಲದಿದ್ದರೆ ಕತ್ತೆಯ ಬಾಲ ಹೋಯಿತು ! ನಮ್ಮದು ಅನ್ಯಾಯ ತೋರಿಸಿ ಕೊಡಿ ಸ್ವಾಮಿ !” ಎಂದು ಚೇರ್ಮನ್ನು ಗಟ್ಟಿ ಧ್ವನಿಯಲ್ಲಿ ಹೇಳಿದನು.

'ಹನುಮನ ಹಳ್ಳಿಯಲ್ಲಿ ಸ್ಕೂಲು ಮಾಡಬೇಕೆಂದು ಪಂಚಾಯತಿ ರೆಜಲ್ಯೂಷನ್ ಆಗಲಿಲ್ಲವೋ ? ಅದಕ್ಕೆ ವ್ಯತಿರಿಕ್ತವಾಗಿ ನೀವುಗಳೇಕೆ ನಡೆಯುತ್ತೀರಿ ? ರಿಕಾರ್ಡು ನೋಡಿ.'

'ಸ್ವಾಮಿ ! ಆ ಶ್ಯಾನುಭೋಗರು ಸಾಮಾನ್ಯರಲ್ಲ ! ಲೋಕವನ್ನೇ ನುಂಗೋವರು ! ಈ ಗರುಡನ ಹಳ್ಳಿಯಲ್ಲೇ ನಾವು ಸಭೆಮಾಡಿ ಆ ದಿನ ಗರುಡನ ಹಳ್ಳಿಯಲ್ಲೇ ಇಸ್ಕೂಲು ಸ್ಥಾಪಿಸಬೇಕು ಎಂದು ತೀರ್ಮಾನ ಮಾಡಿದೆವು. ಮೊದಲು ಹನುಮನ ಹಳ್ಳಿಯವರದು ಆಕ್ಷೇಪಣೆ ಇತ್ತು. ಈ ಕಟ್ಟಡದ ಪಕ್ಕದಲ್ಲಿ ನೀರಿನ ಸಣ್ಣ ಕುಂಟೆ ಇದೆ. ತಮ್ಮ ಮಕ್ಕಳು ಪಕ್ಕದಲ್ಲಿ ನಡೆದು ಬರುತ್ತಾ ಬಿದ್ದು ಹೋಗುತ್ತಾರೆ, ಸತ್ತು ಹೋಗುತ್ತಾರೆ ; ಆದ್ದರಿ೦ದ ಹನುಮನ ಹಳ್ಳಿಯಲ್ಲೇ ಇಸ್ಕೂಲು ಮಾಡಬೇಕು ಎಂದರು. ನಾನು ಅದಕ್ಕೆ- ಹನುಮನ ಹಳ್ಳಿಯ ಪಂಚಾಯತಿ ಕಟ್ಟಡದ ಪಕ್ಕದಲ್ಲೂ ಕುಂಟೆ ಇದೆಯಲ್ಲ! ನಮ್ಮ ಮಕ್ಕಳು ಅಲ್ಲಿ ಬಿದ್ದು ಸಾಯೋದಿಲ್ಲವೇ ? ಇದೇನು ಮಾತು ! ಕುಂಟೆಯಿದ್ದ ಕಡೆ ಎರಡು ಹಳ್ಳಿಯ ಮಕ್ಕಳಿಗೂ ಅಪಾಯವೇ. ಸದ್ಯಕ್ಕೆ ಈ ಪಂಚಾಯತಿ ಕಟ್ಟಡದಲ್ಲಿ ಇಸ್ಕೂಲ್ ನಡೀತಾ ಇರಲಿ ಮೂರು ತಿಂಗಳೊಳಗೆ ಈ ಹಳ್ಳಿಯ ಆಚೆ ಇರುವ ಕಲ್ಲು ಮಂಟಪಕ್ಕೆ ಗೋಡೆ ಎತ್ತಿ ಕಿಟಕಿ ಬಾಗಿಲು ಇಟ್ಟು ಪಕ್ಕಾ ಕಟ್ಟಡ ಮಾಡಿಕೊಡುತ್ತೇವೆ. ಎರಡು ಹಳ್ಳಿಯ ಮಕ್ಕಳಿಗೂ ಅನುಕೂಲ ಆಗುತ್ತದೆ- ಎಂದು ಹೇಳಿದೆ. ಗರುಡನ ಹಳ್ಳಿಯಲ್ಲೇ ಇಸ್ಕೂಲ್ ನಡೆಯಬೇಕು ಎಂದು ರೆಜಲ್ಯೂಷನ್ ಮಾಡಿದೆವು. ಶ್ಯಾನುಭೋಗರು ರೆಜಲ್ಯೂಷನ್ ಬರೆಯೋ ಕಾಲಕ್ಕೆ ಗರುಡನ ಹಳ್ಳಿಗೆ ಬದಲು ಹನುಮನ ಹಳ್ಳಿ ಅಂತ ಬರೆದು