ಪುಟ:ರಂಗಣ್ಣನ ಕನಸಿನ ದಿನಗಳು.pdf/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿ

೨೩೫

ಹಳ್ಳಿಯವರು, ' ಏನೋ ಸ್ವಾಮಿ ನಡೆಯಿರಿ, ಬರುತ್ತೇವೆ. ಆದರೆ ಹನುಮನ ಹಳ್ಳಿಯವರು ಬಹಳ ಪುಂಡುಜನ ! ಆ ದಿವಸ ದೊಣ್ಣೆ ಯೆತ್ತಿಕೊಂಡು ನಮ್ಮನ್ನೆಲ್ಲ ಹೊಡೆಯುವುದಕ್ಕೆ ಬಂದರು ! ಈ ಪಂಚಾಯತಿಗೆ ನೀವು ಬಂದು ಎಲ್ಲಿ ಏಟು ತಿನ್ನುತ್ತೀರೋ ಎಂಬುದೇ ನಮ್ಮ ಹೆದರಿಕೆ. ಎಂದು ಹೇಳುತ್ತಾ ಜೊತೆಯಲ್ಲಿ ಹೊರಟರು.

ಹೀಗೆ ಆ ಎರಡು ಹಳ್ಳಿಯ ಮುಖಂಡರೂ ಕೆಲವರು ರೈತರೂ ಗಡಿಯ ಪ್ರದೇಶದಲ್ಲಿದ್ದ ಆಲದಮರದ ಕೆಳಗೆ ಸೇರಿದರು. ರಂಗಣ್ಣನು ದಾರಿಯುದ್ದಕ್ಕೂ ಆಲೋಚನೆ ಮಾಡುತ್ತಾ ಬರುತ್ತಿದ್ದವನು ತೊಡಕಿಗೆ ಸುಲಭವಾದ ಪರಿಹಾರ ಹೊಳೆಯದೆ, ಆ ಜನರನ್ನೆಲ್ಲ ಉದ್ದೇಶಿಸಿ, ಹಿಂದೆ ಆದದ್ದನ್ನೆಲ್ಲ ಈಗ ಎತ್ತಿ ಆಡುವುದು ಬೇಡ. ಮಾತಿಗೆ ಮಾತು ಬೆಳೆದು ಮನಸ್ತಾಪ ಬೆಳೆಯುತ್ತದೆ. ಈಗ ಬೆಳದಿರುವ ವೈರವೇ ಸಾಕು. ನೀವಿಬ್ಬರೂ ಅನ್ಯೋನ್ಯವಾಗಿರುವುದಕ್ಕೆ ಒಂದು ಸಲಹೆಯನ್ನು ಕೂಡಿ. ಎಂದು ಕೇಳಿದನು.

'ಸ್ವಾಮಿ! ಪಂಚಾಯತಿ ರೆಜಲ್ಯೂಷನ್ನಿನಂತೆ ನಡೆದರೆ ಎಲ್ಲವೂ ಸರಿ ಹೋಗುತ್ತದೆ' ಎಂದು ಹನುಮನ ಹಳ್ಳಿಯವರು ಹೇಳಿದರು,

'ರೆಜಲ್ಯೂಷನ್ನಿನ ಮಾತು ಆಡಬೇಡಿ, ಅದು ಆಗಿ ಹೋಯಿತೆಂದು ತಿಳಿಯಿರಿ' ಎಂದು ರಂಗಣ್ಣ ಹೇಳಿದನು.

'ಸ್ವಾಮಿ ! ಈಗ ನಮ್ಮ ಗರುಡನ ಹಳ್ಳಿಯಲ್ಲಿ ಇಸ್ಕೂಲ್ ನಡೀತಾ ಇದೆ. ಅದು ಅಲ್ಲೇ ಇದ್ದು ಕೊಂಡು ಹೋಗಲಿ, ಹನುಮನ ಹಳ್ಳಿಯವರಿಗೊಂದು ಇಸ್ಕೂಲ್ ಕೊಟ್ಟು ಬಿಡಿ ಸ್ವಾಮಿ ! ಅಲ್ಲಿಗೆ ನಮ್ಮ ನಮ್ಮ ಪಾಡಿಗೆ ನಾವಿರುತ್ತೆವೆ. ವ್ಯಾಜ್ಯ ಇರುವುದಿಲ್ಲ' ಎಂದು ಗರುಡನಹಳ್ಳಿಯವರು ಹೇಳಿದರು.

'ಅದೇನೋ ಒಳ್ಳೆಯ ಸಲಹೆಯೇ ! ಆದರೆ ಅದರಲ್ಲೂ ತೊಡಕಿದೆ. ಮೂರು ಫರ್ಲಾಂಗ್ ದೂರಕ್ಕೆ ಮತ್ತೊಂದು ಸ್ಕೂಲನ್ನು ಸರಕಾರದವರು ಕೊಡುವುದಿಲ್ಲ. ಅದೂ ಅಲ್ಲದೆ ನಿಮ್ಮ ಎರಡು ಹಳ್ಳಿಗಳೂ ಸೇರಿ ಜನ ಸಂಖ್ಯೆ ಐನೂರು ಆಗಿರುವುದರಿಂದ ಈ ಪಂಚಾಯತಿಗೆ ಒಂದು ಸ್ಕೂಲ್ ಕೊಟ್ಟಿದ್ದೇವೆ. ಈಗ ಇನ್ನೂರೈವತ್ತು ಪ್ರಜಾ ಸಂಖ್ಯೆಯ ಹಳ್ಳಿಗಳಿಗೆಲ್ಲ