ಪುಟ:ರಂಗಣ್ಣನ ಕನಸಿನ ದಿನಗಳು.pdf/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩೬

ರಂಗಣ್ಣನ ಕನಸಿನ ದಿನಗಳು

ಸ್ಕೂಲುಗಳನ್ನು ಕೊಡುತ್ತ ಹೋದರೆ ಇನ್ನೂ ಹೆಚ್ಚಿನ ಪ್ರಜಾ ಸಂಖ್ಯೆ ಇರುವ ಗ್ರಾಮಗಳವರು- ತಮಗೆ ಸ್ಕೂಲ್ ಕೊಡಲಿಲ್ಲ, ಹನುಮನ ಹಳ್ಳಿಯವರೂ ಗರುಡನ ಹಳ್ಳಿಯವರೂ ಬಾಳೆಹಣ್ಣಿನ ಗೊನೆಗಳನ್ನು ಕೊಟ್ಟಿದ್ದರಿಂದ ಇನ್ಸ್ಪೆಕ್ಟರು ಆ ಸಣ್ಣ ಹಳ್ಳಿಗಳಿಗೆಲ್ಲ ಇಸ್ಕೂಲು ಕೊಟ್ಟು ಬಿಟ್ಟರು ಎಂದು ನನ್ನನ್ನು ವೃಥಾ ದೂರುತ್ತಾರೆ. ಅಷ್ಟೇ ಅಲ್ಲ, ಕೇಳಿ, ಹನುಮನ ಹಳ್ಳಿಗೆ ಕೊಟ್ಟರೆ ಒಂದು ಗ್ರಾಂಟು ಸ್ಕೂಲನ್ನು ಕೊಡಬೇಕು. ಗ್ರಾಂಟು ಸ್ಕೂಲುಗಳು ಚೆನ್ನಾಗಿ ಕೆಲಸ ಮಾಡುವುದಿಲ್ಲ. ಗರುಡನ ಹಳ್ಳಿಯಲ್ಲೊಂದು, ಹನುಮನ ಹಳ್ಳಿಯಲ್ಲೊಂದು ಎರಡು ಕೆಲಸಕ್ಕೆ ಬಾರದ ಗ್ರಾಂಟ್ ಸ್ಕೂಲುಗಳನ್ನು ಕೊಟ್ಟರೆ ಪ್ರಯೋಜನವೇನು ? ಒಂದುವೇಳೆ ಹನುಮನ ಹಳ್ಳಿಗೆ ಸರಕಾರಿ ಸ್ಕೂಲನ್ನು ನಾನು ಕೊಟ್ಟರೆ ಪುನಃ ನಿಮನಿಮಗೆ ವ್ಯಾಜ್ಯ ಬೆಳೆಯುತ್ತದೆ. ಹನುಮನ ಹಳ್ಳಿಯವರಿಗೆ ಸರಕಾರಿ ಸ್ಕೂಲ್ ನಮಗೆ ಮಾತ್ರ ಗ್ರಾಂಟ್ ಸ್ಕೂಲ್ ! ಇದೇನು ಸ್ವಾಮಿ ನಿಮ್ಮ ನ್ಯಾಯ ? ಎಂದು ನನ್ನನ್ನು ಕೇಳುತ್ತೀರಿ. ಆದ್ದರಿಂದ ನಾನು ನನ್ನ ಸಲಹೆಯನ್ನು ಹೇಳುತ್ತೇನೆ. ಅದನ್ನು ಸ್ವಲ್ಪ ಆಲೋಚಿಸಿ. ಈಗ ಇಲ್ಲಿ ಮೂವರು ಕಕ್ಷಿಗಾರರಿದ್ದೇವೆ: ಗರುಡನ ಹಳ್ಳಿಯವರು, ಹನುಮನಹಳ್ಳಿಯವರು, ಮತ್ತು ನಾನು. ಮೂವರೂ ಹೊಂದಿಕೊ೦ಡು ಹೋಗೋಣ, ಈಗ ನಿಮ್ಮಿಬ್ಬರಿಗೂ ವೈಮನಸ್ಯ ಇದೆ. ಒಬ್ಬರು ಹೇಳಿದ್ದಕ್ಕೆ ಇನ್ನೊಬ್ಬರು ಪ್ರತಿ ಹೇಳುತ್ತೀರಿ. ಆದ್ದರಿಂದ ನಾನು ಹೇಳಿದಂತೆ ನೀವಿಬ್ಬರೂ ಕೇಳಿದರೆ ಚೆನ್ನಾಗಿರುತ್ತದೆ.'

'ಅದೇನು ಸ್ವಾಮಿ ? ಹೇಳಿ ನೋಡೋಣ' ಎಂದು ಚೇರ್ಮನ್ನು ಕೇಳಿದನು.

'ಆ ಎದುರಿಗಿರುವ ಹೊಲ ಯಾರಿಗೆ ಸೇರಿದ್ದು ? ಪೈರು ಚೆನ್ನಾಗಿ ಬಂದಿದೆ !' ಎಂದು ರಂಗಣ್ಣ ಕೇಳಿದನು

'ಅದು ಹನುಮನ ಹಳ್ಳಿಯ ರೈತನದು ಸ್ವಾಮಿ ! ಇಗೋ ಇಲ್ಲಿಯೇ ಇದ್ದಾನೆ ರೈತ' ಎಂದು ಶ್ಯಾನುಭೋಗನು ಹೇಳಿ ಒಬ್ಬ ರೈತನನ್ನು ಮುಂದಕ್ಕೆ ತಳ್ಳಿ ಹರಿಚಯಮಾಡಿಕೊಟ್ಟನು.