ಪುಟ:ರಂಗಣ್ಣನ ಕನಸಿನ ದಿನಗಳು.pdf/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩೮

ರಂಗಣ್ಣನ ಕನಸಿನ ದಿನಗಳು

ಯಂತೆ ಇಲ್ಲಿ ಕಟ್ಟಡ ಕಟ್ಟುತ್ತೇವೆ. ಆದರೆ ಮಂಟಪವನ್ನು ಸರಿಮಾಡುವುದಕ್ಕೆ ಲಾಗೋಡು ಹೆಚ್ಚು ಹಿಡಿಯುತ್ತಿರಲಿಲ್ಲ. ಪಾಯ ಹಿಂದೆ ಹಾಕಿದ್ದು ಭದ್ರವಾಗಿದೆ ; ಮೂರು ಕಡೆ ಗೋಡೆಗಳೂ ಈಗಿವೆ, ಇಲ್ಲಿ ಹೊಸದಾಗಿ ಕಟ್ಟಡ ಕಟ್ಟ ಬೇಕು. ಸರಕಾರದಿಂದ ಏನಾದರೂ ಗ್ರಾಂಟು ಸಹಾಯ ಮಾಡಿ ಸ್ವಾಮಿ ! ಎಂದು ಹೇಳಿದನು. ರಂಗಣ್ಣ, ಆಗಲಿ! ನೀವು ಹೇಳುವುದು ನ್ಯಾಯವಾಗಿದೆ. ಸರಕಾರದಿಂದ ಐನೂರು ರೂಪಾಯಿ ಗ್ರಾಂಟನ್ನು ಕೊಡಿಸಲು ಶಿಫಾರಸು ಮಾಡುತ್ತೇನೆ ; ಪ್ರಯತ್ನ ಪಟ್ಟು ಕೊಡಿಸುತ್ತೇನೆ ; ಉಳಿದ ಖರ್ಚೆಲ್ಲ ನಿಮ್ಮದು ' ಎಂದು ಹೇಳಿದನು, ಬಳಿಕ, ' ಶಂಕರಪ್ಪ ! ನೋಟುಮಾಡಿಕೊಳ್ಳಿ, ಈಗ ಹೊಸದಾಗಿ ಮಂಜೂರಾಗಿರುವ ಸರಕಾರಿ ಸ್ಕೂಲುಗಳಲ್ಲಿ ಒಂದು ಇಲ್ಲಿಗೆ ; ಇನ್ನೊಂದು ನಾಗೇನಹಳ್ಳಿಗೆ. ಉಳಿದುವನ್ನು ಆಮೇಲೆ ತಿಳಿಸುತ್ತೇನೆ. ಜನಾರ್ದನಪುರಕ್ಕೆ ಹೋದಮೇಲೆ ಆರ್ಡರುಗಳನ್ನು ಬರೆಯರಿ. ರುಜು ಮಾಡುತ್ತೇನೆ' ಎಂದು ರಂಗಣ್ಣ ಗುಮಾಸ್ತೆಗೆ ಹೇಳಿದನು. ಎಲ್ಲರಿಗೂ ಸಂತೋಷವಾಯಿತು. ಆ ಆಲದಮರದ ಕೆಳಗೆ ಕುಳಿತವರು ಅಲ್ಲಿಯೇ ಮುಚ್ಚಳಿಕೆಗಳನ್ನು ಬರೆದು ಕೊಟ್ಟರು. 'ಸ್ವಾಮಿ ! ಕೊಯ್ಲಾದ ಒಂದು ತಿಂಗಳೊಳಗಾಗಿ ಕಟ್ಟಡವನ್ನು ಕಟ್ಟಿ ಬಿಡುತ್ತೇವೆ. ಸರಕಾರಿ ಸ್ಕೂಲಿನ ಪ್ರಾರಂಭೋತ್ಸವಕ್ಕೆ ತಾವೇ ದಯಮಾಡಿಸಬೇಕು' ಎಂದು ಚೇರ್ಮನ್ನು ಹೇಳಿದನು. “ ಆಗಲಿ! ಬಹಳ ಸಂತೋಷದಿಂದ ಬರುತ್ತೇನೆ, ನೋಡಿ! ಹಾಳು ಒಂದು ಗ್ರಾಂಟ್ ಸ್ಕೂಲಿನ ಜಗಳದಲ್ಲಿ ರಸಬಾಳೆಹಣ್ಣಿನ ಗೊನೆಗಳನ್ನು ಬಹಳವಾಗಿ ಖರ್ಚು ಮಾಡಿದಿರಿ ! ಸರಕಾರಿ ಸ್ಕೂಲನ್ನು ಕೊಟ್ಟಿರುವ ನನಗೆ ಏನು ಇನಾಮು ಕೊಡುತ್ತೀರಿ' ಎಂದು ರಂಗಣ್ಣನು ನಗುತ್ತಾ ಹೇಳಿದನು.

“ತಾವು ಮಾಡಿರುವ ಉಪಕಾರಕ್ಕೆ ಬೆಲೆಯೇ ಇಲ್ಲ ಸ್ವಾಮಿ! ನಾವು ಹಳ್ಳಿಯ ಜನ, ಒರಟು ; ಏನೋ ಹುಚ್ಚು ಹಟ ಹಿಡಿದು ಕೋರ್ಟು ಕಚೇರಿಗಳನ್ನು ಹತ್ತಿ ನಷ್ಟ ಮಾಡಿಕೋತೇವೆ. ಬುದ್ಧಿ ಹೇಳಿ ಪಂಚಾಯತಿ ನಡೆಸೋ ಧಣಿಗಳು ಬರಬೇಕು, ಆಗ ನಾವೂ ಸುಧಾರಿಸುತ್ತವೆ ? ಎಂದು ಚೇರ್ಮನ್ನು ಹೇಳಿದನು.