ಪುಟ:ರಂಗಣ್ಣನ ಕನಸಿನ ದಿನಗಳು.pdf/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪೦

ರಂಗಣ್ಣನ ಕನಸಿನ ದಿನಗಳು


ಕಟ್ಟಡ ಎಬ್ಬಿಸಲಿಕ್ಕೂ ಸಿದ್ಧರಿದ್ದೇವೆ. ಸರ್ಕಾರಿ ಸ್ಕೂಲು ನಮಗೆ ದೊರೆಯಿತಲ್ಲ ! ಅದೇ ನಮಗೆ ಪರಮಾನಂದ !'

ಉಪಾಹಾರ ಮುಗಿಯಿತು. ರಂಗಣ್ಣ ಶ್ಯಾನುಭೋಗನೊಡನೆ ಹೊರಟು ಪಂಚಾಯತಿ ಹಾಲಿಗೆ ಬಂದನು. ಅಲ್ಲಿ ಗರುಡನ ಹಳ್ಳಿಯವರು ರಸಬಾಳೆಯ ಹಣ್ಣುಗಳನ್ನೂ ಹಾಲನ್ನೂ ಇಟ್ಟು ಕೊಂಡಿದ್ದರು. 'ಸ್ವಾಮಿಯವರು ತೆಗೋಬೇಕು !' ಎಂದು ಚೇರ್ಮನ್ನು ಹೇಳಿ ತಟ್ಟೆಯನ್ನು ಮುಂದಿಟ್ಟನು. ಯಥಾಶಕ್ತಿ ಅವುಗಳನ್ನು ತೆಗೆದುಕೊಂಡು, ಎಲ್ಲರಿಂದಲೂ ನಮಸ್ಕಾರ ಮಾಡಿಸಿಕೊಂಡು, ಎಲ್ಲರಿಗೂ ತಾನೂ ನಮಸ್ಕಾರ ಮಾಡಿ ಜೋಡೆತ್ತಿನ ಗಾಡಿಯನ್ನು ರಂಗಣ್ಣ ಹತ್ತಿದನು. ಶಂಕರಪ್ಪ ಹಿಂದುಗಡೆ ಹತ್ತಿಕೊಂಡನು.

'ಶ್ಯಾನುಭೋಗರೇ ! ನಾಳೆಯೆ ಪತ್ರ ರಿಜಿಸ್ಟರ್ ಆಗಿ ಹೋಗಬೇಕು. ಪಾರ್ಟಿ ತನ್ನ ಮನಸ್ಸು ಬದಲಾಯಿಸಿಬಿಟ್ಟಾನು !' ಎಂದು ರಂಗಣ್ಣ ಹೇಳಿದನು.

'ನಾಳೆಯೇ ಬರುತ್ತೇನೆ ಸ್ವಾಮಿ ! ಇನ್ನು ಇದರಲ್ಲಿ ಯಾರೂ ಬದಲಾಯಿಸುವುದಿಲ್ಲ.' ಎಂದು ಶ್ಯಾನುಭೋಗನು ಉತ್ತರ ಕೊಟ್ಟನು.

ಗಾಡಿ ಹೊರಟಿತು. “ಬಹಳ ಸೊಗಸಾದ ಏರ್ಪಾಟನ್ನು ಮಾಡಿಬಿಟ್ಟರಿ, ಸ್ವಾಮಿ ! ಈ ತೊಡಕು ವ್ಯಾಜ್ಯ ಹೇಗೆ ತಾನೆ ಪರಿಹಾರವಾಗುತ್ತ ದೆಯೋ ? ಏನೇನು ಭಂಗಪಡಬೇಕೊ ? ಎಂದು ನಾನು ಹೆದರಿ ಕೊಂಡಿದ್ದೆ' ಎಂದು ಶಂಕರಪ್ಪ ಹೇಳಿದನು.

'ದೇವರು ಪ್ರೇರೇಪಣೆ ಮಾಡಿ ಹೇಗೋ ಪರಿಹಾರ ಮಾಡಿದನು ಶಂಕರಪ್ಪ ! ನನ್ನ ಕೈಯಲ್ಲಿ ಏನಿದೆ !'