ಪುಟ:ರಂಗಣ್ಣನ ಕನಸಿನ ದಿನಗಳು.pdf/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೆಂಗಳೂರಿನಲ್ಲಿ

೨೪೩

ಅದರ ನಕಲನ್ನು ತೆಗೆದು ಕಳಿಸಬೇಕೆಂದು ಆರ್ಡರ್ ಮಾಡುತ್ತೇನೆ. ಆತನಿಗೆ ಕೊಡಿ. ಅದನ್ನು ತೆಗೆದುಕೊಳ್ಳಲು ನಿರಾಕರಿಸಿದರೆ, ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕಳಿಸಿ ದಾಖಲೆಯಿಟ್ಟುಕೊಳ್ಳಿ. ಆಮೇಲೆ ಮುಂದಿನ ಕಾರ್ಯಕ್ರಮವನ್ನು ಆಲೋಚಿಸುತ್ತೇನೆ. ಈಗ ನಾನು ಬೆಂಗಳೂರಿಗೆ ಹೋಗಿ ಬರಬೇಕು.

ರಂಗಣ್ಣ ಹೆಡ್‌ಮೇಷ್ಟರನ್ನು ಕಳಿಸಿಬಿಟ್ಟು ಉಗ್ರಪ್ಪನ ವಿಚಾರದಲ್ಲಿ ಆರ್ಡರ್ ಮಾಡಿ, ಆವಶ್ಯಕವಾದ ರಿಕಾರ್ಡುಗಳನ್ನು ಪೆಟ್ಟಿಗೆಯಲ್ಲಿ ಹಾಕಿಕೊಂಡು ಬೆಂಗಳೂರಿಗೆ ಪ್ರಯಾಣ ಮಾಡಿದನು, ತಾನು ನಿಸ್ಪೃಹನಾಗಿ ನಿರ್ವಂಚನೆಯಿಂದ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದರೂ ದೊಡ್ಡ ಸಾಹೇಬರುಗಳನ್ನು ಕಾಣುವುದು ಉತ್ಸಾಹಕರ ವಾದ ವಿಚಾರವಲ್ಲ- ಎನ್ನುವುದು ಅವನಿಗೆ ತಿಳಿದಿತ್ತು. ಅವರಿಂದ ಸಹಾಯ ಸಲಹೆ ಮತ್ತು ಪ್ರೋತ್ಸಾಹಗಳಿಗೆ ಬದಲು ಬೈಗಳು, ಟೀಕೆಗಳು ಮತ್ತು ತೇಜೋವಧೆಗಳೇ ದೊರೆಯುವ ಫಲಗಳೆಂದು ಮನಸ್ಸು ಗಟ್ಟಿ ಮಾಡಿ ಕೊಂಡಿದ್ದನು. ತಾವೇದಾರನ ಕರ್ತವ್ಯ ಪಾಲನೆ ನಡೆಯಲೆಂದು ಡೈರೆಕ್ಟರನ್ನು ನೋಡಿದ್ದಾಯಿತು ; ವಿಷಯಗಳನ್ನು ವಿವರಿಸಿದ್ದಾಯಿತು ; ದಾಖಲೆಗಳನ್ನು ತೋರಿಸಿದ್ದಾಯಿತು ; ಪಾಟಿ ಸವಾಲಿನ ಅಗ್ನಿ ಪರೀಕ್ಷೆಗೆ ಸಿಕ್ಕಿ ಕೊಂಡದ್ದೂ ಆಯಿತು. ಎಲ್ಲವೂ ಸರಿಯೆ, ಟ್ಯಾಕ್ಟ್ ಇಲ್ಲ' ಎಂದು ಅನ್ನಿಸಿಕೊಂಡು ಹಿಂದಿರುಗಿದ್ದಾಯಿತು. ಇನ್ನು ತಿಮ್ಮರಾಯಪ್ಪನನ್ನು ಕಂಡು ತನ್ನ ಮನಸ್ಸಿನಲ್ಲಿರುವುದನ್ನೆಲ್ಲ ಕಕ್ಕಿಬಿಟ್ಟು ಹೊರಟುಹೋಗೋಣವೆಂದು ಜುಗುಪ್ಸೆಯಿಂದ ರಂಗಣ್ಣನು ತಿಮ್ಮರಾಯಪ್ಪನ ಮನೆಗೆ ಹೋದನು, ಅವನು ಮನೆಯಲ್ಲೇ ನಿರೀಕ್ಷಣೆ ಮಾಡುತ್ತಾ ಕುಳಿತಿದ್ದನು. ಸ್ನೇಹಿತನು ಬರುವನೆಂದು ಸಂತೋಷಭರಿತನಾಗಿ, ಆ ದಿನ ಕಚೇರಿಯಿಂದ ಬರುತ್ತಾ ಆನಂದಭವನಕ್ಕೆ ಹೋಗಿ ತಿಂಡಿಗಳ ಪೊಟ್ಟಣಗಳನ್ನು ಕಟ್ಟಿಸಿಕೊಂಡು ಚೀಲದಲ್ಲಿ ಹಾಕಿಕೊಂಡು ಮನೆಗೆ ಬಂದಿದ್ದನು !

'ಏನು ರಂಗಣ್ಣ ! ಚೆನ್ನಾಗಿದ್ದೀಯಾ ? ಮನೆಯಲ್ಲಿ ಆಕೆ ಸೌಖ್ಯವಾಗಿದ್ದಾಳೆಯೆ ? ಮಕ್ಕಳು ಹೇಗಿದ್ದಾರೆ ? ಈ ದಿನದ ಭೇಟಿಯ ಪರಿಣಾಮ ಏನು ?' ಎಂದು ತಿಮ್ಮರಾಯಪ್ಪ ಕೇಳಿದನು.