ಪುಟ:ರಂಗಣ್ಣನ ಕನಸಿನ ದಿನಗಳು.pdf/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಣ್ಣನ ಕನಸಿನ ದಿನಗಳು

೨೪೬

'ಹಾಗೆ ಹೇಳುವುದು ಸಾಹೇಬರುಗಳ ರೂಢಿ, ನಾವು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಟ್ಟು ಬಿಡಬೇಕು. ಅವರು ಏನಾದರೂ ಝಂಕಿಸಿದರೆ ಮನಸ್ಸಿಗೆ ಹಚ್ಚಿಸಿಕೊಳ್ಳಬಾರದು.

'ನನ್ನ ಅನುಭವ ಹೇಳುತ್ತೇನೆ ಕೇಳು ತಿಮ್ಮರಾಯಪ್ಪ ! ಒಬ್ಬ ಸಾಹೇಬರಾದರೂ ಕೆಳಗಿನವರಿಗೆ ಈ ರೀತಿ ಪಾಠಮಾಡಿ ; ತೋರಿಸುತ್ತೇನೆ, ತಿಳಿದು ಕೊಳ್ಳಿ ಎಂದು ಕಾರ್ಯತಃ ತೋರಿಸಿಕೊಟ್ಟವರಿಲ್ಲ! ಹೀಗೆ ತಿದ್ದಿಕೊಳ್ಳಿ - ಎಂದು ಸಲಹೆಗಳನ್ನು ಕೊಟ್ಟವರಿಲ್ಲ ! ಮರದ ತುಂಡಿನಂತೆ ಮರದ ಕುರ್ಚಿಯ ಮೇಲೆ ಕುಕ್ಕರಿಸಿದ್ದು, ತಮ್ಮ ಕೈ ಪುಸ್ತಕದಲ್ಲಿ ಏನನ್ನೋ ಕಿರಿಕಿಕೊಂಡು ಹೋಗುವುದು ; ದೊಡ್ಡ ದೊಡ್ಡದಾಗಿ ಇನ್‌ಸ್ಪೆಕ್ಷನ್ ರಿಪೋರ್ಟುಗಳನ್ನು ಬರೆದು ಮೊದಲಿಂದ ಕಡೆಯವರೆಗೂ ದೋಷೋದ್ಘಾಟನಮಾಡಿ ಹಳಿದುಬಿಡುವುದು | ನಮ್ಮ ಕಚೇರಿಗಳಿಗೆ ಬರುವುದು | ಒಂದು ಇಪ್ಪತ್ತು ರುಪಾಯಿ ಸಂಬಳದ ಗುಮಾಸ್ತೆ ಬರೆದಿಟ್ಟ ತನಿಖೆಯ ವರದಿಗಳನ್ನು ನಂಬಿಕೊಂಡು ಟೀಕೆಸುವುದು ! ತಾವು ಏತಕ್ಕೆ ನೋಡಬಾರದು? ನಮ್ಮನ್ನು ಕೂಡಿಸಿ ಕೊಂಡೋ ನಿಲ್ಲಿಸಿ ಕೊಂಡೋ ಏತಕ್ಕೆ ಕೇಳಬಾರದು ? ನಾವು ಅನನುಭವಿಗಳಾಗಿದ್ದು ತಪ್ಪು ಮಾಡಿದ್ದರೆ, ಈ ರೀತಿ ತಪ್ಪು ಮಾಡಬೇಡಿ ಎಂದು ಸಮಾಧಾನಚಿತ್ತದಿಂದ ಏತಕ್ಕೆ ಬುದ್ದಿ ಹೇಳ ಬಾರದು ” ಹಿಂದೆ ಒಬ್ಬರು ಸಾಹೇಬರು ಒಂದು ಕಡೆ ಹೈಸ್ಕೂಲ್ ಇನ್ ಸ್ಪೆಕ್ಷನ್ನಿಗೆ ಹೋದರು. ಅಲ್ಲಿ ಒಬ್ಬ ಸೈನ್ಸ್ ಮೇಷ್ಟರಿಗೆ ವರ್ಗವಾಗಿ ಬೇರೊಬ್ಬನು ಬಂದಿದ್ದನು. ಹೊಸಬನು ಬಂದು ಒಂದು ತಿಂಗಳು ಮಾತ್ರ ಆಗಿತ್ತು. ತನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಕೊಂಡು ಹೋಗುತ ಹೆಡ್ ಮಾಸ್ಟರವರ ಮೆಚ್ಚಿಕೆಯನ್ನು ಪಡೆದಿದ್ದನು. ಸಾಹೇಬರು ಪ್ರಾಕ್ಟಿಕಲ್ ವರ್ಕಿನ ಪುಸ್ತಕಗಳನ್ನು ತನಿಖೆ ಮಾಡಿದಾಗ ಹಿಂದಿನ ಅಭ್ಯಾಸಗಳನ್ನು ತಿದ್ದದೇ ಬಿಟ್ಟಿದ್ದ ದು ಅವರ ಗಮನಕ್ಕೆ ಬಂತು. ಮೇಷ್ಟರನ್ನು ಕರೆದು ಕೇಳಿದರು. ಆತ,- ಸಾರ್ ! ನಾನು ಬಂದು ಒಂದು ತಿಂಗಳು ಮಾತ್ರ ಆಯಿತು. ನಾನು ದೀರ್ಘ. ಖಾಯಿಲೆ ಬಿದ್ದಿದ್ದು ಈಚೆಗೆ ಸ್ವಲ್ಪ ಗುಣ ಹೊಂದಿ ಕೆಲಸಕ್ಕೆ ಬಂದವನು, ಹೆಡ್ ಮಾಸ್ಟರಿಗೂ ತಿಳಿದಿದೆ. ತಿದ್ದದೇ ಬಿಟ್ಟಿರುವ ಅಭ್ಯಾಸಗಳೆಲ್ಲ ಹಿಂದಿನ ಸೈನ್ಸ್ ಮೇಷ್ಟರ ಕಾಲದ್ದು,