ಪುಟ:ರಂಗಣ್ಣನ ಕನಸಿನ ದಿನಗಳು.pdf/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಣ್ಣನ ಕನಸಿನ ದಿನಗಳು

೨೪೮

ಜನಾರ್ದನಪುರದಲ್ಲೇ ನಿಲ್ಲುತ್ತಾನೆ. ಅವನ ಮೇಲೆ ನನ್ನ ಅಧಿಕಾರ ಏನೂ ಇರುವುದಿಲ್ಲ. ಆವನು ಕಿರುಕುಳ ಹೆಚ್ಚಾಗಿ ಕೊಡುತ್ತಾನೆ. ಜೊತೆಗೆ ಅವನು ಬಹಳ ಪುಂಡ ; ಅವನದು ಹೊಲಸು ಬಾಯಿ ; ಮೇಲೆ ಬೀಳುವುದಕ್ಕೂ ಹಿಂಜರಿಯೋ ಮನುಷ್ಯನಲ್ಲ !?

'ಹಾಗಾದರೆ ಅವನ ತಂಟೆಗೆ ಹೋಗಬೇಡ! ಬೇಕಾಗಿದ್ದರೆ ನೀನು ಎರಡು ತಿಂಗಳು ಕಾಲ ರಜಾ ತೆಗೆದುಕೊಂಡು ಬೆಂಗಳೂರಿಗೆ ಬಂದು ಬಿಡು. ಇಲ್ಲದಿದ್ದರೆ ಪುನಃ ಸಾಹೇಬರನ್ನು ಕಂಡು ಜನಾರ್ದನಪುರದಿಂದ ವರ್ಗ ಮಾಡಿಸಿಕೂ. ಬೇರೆ ರೇಂಜಿನಲ್ಲಿ ಕೆಲಸ ಮಾಡು.'

'ಈ ಹೇಡಿ ಸಲಹೆಯನ್ನು ನನಗೆ ಕೊಡುತ್ತೀಯಾ! ನಿನಗೆ ನಾಚಿಕೆಯಿಲ್ಲ!'

'ಅಯ್ಯೋ ಶಿವನೇ ? ಶಿವನೇ ! ಕುಳಿತುಕೋ ರಂಗಣ್ಣ ! ಇದೇನು ಉಗ್ರಾವತಾರ ! ಕುಳಿತುಕೊಂಡೇ ನನ್ನನ್ನು ಬಯ್ಯಿ ; ಬಯ್ಸಿಕೊಳ್ಳುತ್ತೇನೆ! ಹೊಡಿ, ಹೊಡಿಸಿಕೊಳ್ಳುತ್ತೇನೆ !'

'ಅವನಿಗೆ ಹೆದರಿಕೊಂಡು ರಜಾ ತೆಗೆದುಕೊ ಎಂದು ನನಗೆ ಹೇಳುತ್ತೀಯಲ್ಲ! ಹೆಡ್ ಮೇಷ್ಟ್ರ ಮಾತನ್ನು ಆ ಪುಂಡ ಕೇಳುವುದಿಲ್ಲ; ಪಾಠಶಾಲೆಯಲ್ಲಿ ಪಾಠ ಮಾಡುವುದಿಲ್ಲ ; ಹುಡುಗರನ್ನ ತರಗತಿಯಿಂದ ಅಟ್ಟಿ, ಬಿಡುತ್ತಾನೆ ; ಮೆಮೊ ಮಾಡಿದರೆ ಅಂಗೀಕರಿಸುವುದಿಲ್ಲ, ಜವಾನನಿಗೆ ಕೆನ್ನೆಗೆ ಹೊಡೆದು ದೂಡಿಬಿಡುತ್ತಾನೆ ; ಆ ಮೆಮೋ ಪುಸ್ತಕವನ್ನೇ ಕಿತ್ತಿಟ್ಟುಕೊಂಡು ಹೆಡ್‌ಮೇಷ್ಟನ್ನು ಸತಾಯಿಸುತ್ತಾನೆ ; ತನ್ನ ಮಾತಿಗೆ ಬಂದರೆ ಹೊಡೆದು ಅಪ್ಪಳಿಸುತ್ತೇನೆ ಎಂದು ಹೆಡ್‌ಮೇಷ್ಟರಿಗೆ ಹೆದರಿಸುತ್ತಾನೆ. ಈಗ ನೀನು ಕೊಡೋ ಸಲಹೆ ನೋಡು ! ಆ ದುಷ್ಟ ಮೇಷ್ಟರನ್ನು ಬಲಿ ಹಾಕಿ ಶಿಸ್ತು ಕಾಪಾಡುವುದಕ್ಕೆ ಬದಲು ಹೇಡಿಯಂತೆ ರೇಂಜು ಬಿಟ್ಟು ನಾನು ಓಡಿ ಹೋಗಬೇಕೇ ?

'ಸಮಾಧಾನ ಮಾಡಿಕೋ ರಂಗಣ್ಣ ! ನಿನ್ನ ಕ್ಷೇಮಕ್ಕಾಗಿ ನಾನು ಹೇಳಿದೆ ಹಾಳು ಗುಲಾಮಗಿರಿಗೋಸ್ಕರ ಯಾರೂ ಮೆಚ್ಚದ ಈ ಶಾಪೇ ದಾರಿ ಕೆಲಸಕ್ಕೋಸ್ಕರ ನೀನು ಅಪಾಯಕ್ಕೊಳಗಾಗಬಾರದು