ಪುಟ:ರಂಗಣ್ಣನ ಕನಸಿನ ದಿನಗಳು.pdf/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೆಂಗಳೂರಿನಲ್ಲಿ

೨೪೯

ಎನ್ನುವ ಅಭಿಪ್ರಾಯ ದಿಂದ ಹೇಳಿದೆ. ಈಗಾಗಲೇ ನೀನು ಆ ಮುಖಂಡರ ಬಲವದ್ವಿರೋಧ ಕಟ್ಟಿ ಕೊಂಡಿದ್ದೀಯೆ. ಯಾವ ಕಾಲಕ್ಕೆ ಏನು ಕೆಡುಕಾಗುವುದೋ ಎಂದು ನಾನು ಹೆದರುತ್ತಿದ್ದೇನೆ. ನೀನು ಒಂಟಿಯಾಗಿ ಕಾಡುದಾರಿಗಳಲ್ಲಿ ಸುತ್ತಾಡುತ್ತಾ ಇರುತ್ತೀಯೆ, ಅವರೂ ಮಹಾದುಷ್ಟರು ! ಪ್ರಬಲರು ! ನಿನ್ನದು ಇನ್ನೂ ಎಳೆಯ ಸಂಸಾರ ಆಲೋಚನೆ ಮಾಡು.'

'ನಾನು ಸಾಯುವುದಾದರೆ ಜನಾರ್ದನಪುರದಲ್ಲೇ ಸಾಯುತ್ತೇನೆ ! ಅಲ್ಲೇ ಭಸ್ಮವಾಗಿ ಹೋಗುತ್ತೇನೆ ! ನನ್ನ ಹಣೆಯಲ್ಲಿ ದುರ್ಮರಣ ಬರೆದಿದ್ದರೆ ಅದನ್ನು ತಪ್ಪಿಸುವುದಕ್ಕಾಗುತ್ತದೆಯೇ? ಹೇಡಿಯಾಗೆಂದು ಮಾತ್ರ ನನಗೆ ಹೇಳಬೇಡ, ಆ ದುಷ್ಟನನ್ನು ಬಲಿಹಾಕದ ಹೊರತು ನನಗೆ ಸಮಾಧಾನವಿಲ್ಲ. ಪಾಪ ! ಬಡ ಮೇಷ್ಟರುಗಳು ಎಷ್ಟೋ ಜನ ಇದ್ದಾರೆ! ಭಯ ಭಕ್ತಿಗಳಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ! ಅವರ ವಿಷಯದಲ್ಲಿ ಕರುಣೆ ತೋರಿಸು ಎಂದು ಹೇಳು ; ಶಿರಸಾವಹಿಸಿ ನಡೆಯುತ್ತೇನೆ. ನೀನು ಹೇಳದೆಯೇ ನಾನು ಅವರ ತಪ್ಪುಗಳನ್ನೆಲ್ಲ ಮನ್ನಿಸಿ ರಕ್ಷಣೆ ಮಾಡಿಕೊಂಡು ಬರುತ್ತಿದೇನೆ. ಆ ಉಗ್ರಪ್ಪ ! ದೊಡ್ಡ ಪುಂಡ ! ಆ ಮುಖಂಡರ ಏಜೆಂಟು ! ಶುದ್ಧ ಅವಿಧೇಯ ! ಅವನ ಏಚಾರದಲ್ಲಿ ಕರುಣೆ ತೋರಿಸುವುದಿಲ್ಲ. ಅವನಿಗೆ ದಂಡನೆಯೇ ಔಷಧ ! ಅವನಿಗೆ, ಅವನ ಮುಖಂಡರಿಗೆ ನಾನು ಹೆದರುವುದಿಲ್ಲ ! '

'ಹಾಗಾದರೆ ಸಸ್ಪೆಂಡ್ ಮಾಡಲೇಬೇಕೆಂದು ತೀರ್ಮಾನಿಸಿದ್ದಿಯಾ ?'

'ಅವನು ತನ್ನ ನಡತೆ ತಿದ್ದಿಕೊಳ್ಳದಿದ್ದರೆ !”

'ಅವನು ತನ್ನ ನಡತೆಗಿಡತೆ ತಿದ್ದಿ ಕೊಳ್ಳೋದಿಲ್ಲ ರಂಗಣ್ಣ! ಅವನು ಬೇಕುಬೇಕೆಂತಲೇ ನಿನ್ನೊಡನೆ ಜಗಳಕ್ಕೆ ನಿಂತಿದ್ದಾನೆ. ಆದೆಲ್ಲ ಒಳ ಸಂಚು ನಿನಗೆ ಅರ್ಥವಾಗುವುದಿಲ್ಲ. ನಿನ್ನನ್ನು ಅವಮಾನಗೊಳಿಸಿ ಕಡೆಗೆ ಅಪಾಯಕ್ಕೂ ಈಡುಮಾಡಬೇಕು ಎಂಬುದು ಅವರ ಸಂಕಲ್ಪ. ಹಾಗಿಲ್ಲದಿದ್ದರೆ ಈಚೆಗೆ ಅವನೇಕೆ ತುಂಟಾಟವನ್ನು ಪ್ರಾರಂಭಿಸಿದ ! ಮೊದಲು ಸುಮ್ಮನೇ ಇದ್ದನಲ್ಲ !'