ಪುಟ:ರಂಗಣ್ಣನ ಕನಸಿನ ದಿನಗಳು.pdf/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಣ್ಣನ ಕನಸಿನ ದಿನಗಳು

೨೫೦

'ನನಗೂ ಆರ್ಥವಾಗಿದೆ ತಿಮ್ಮರಾಯಪ್ಪ ! ಆದ್ದರಿಂದಲೇ ಅವರಿಗೆ ಹೆದರಿಕೊಳ್ಳದೆ ಬಲಿಹಾಕಿಬಿಡೋಣವೆಂದು ತೀರ್ಮಾನಿಸಿದ್ದೇನೆ.'

'ಹಾಗಾದರೆ ಕೇಳು ರಂಗಣ್ಣ! ನಿನಗೆ ಆಪ್ತರಾದವರು, ನಿನ್ನಲ್ಲಿ ವಿಶ್ವಾಸ ಗೌರವವುಳ್ಳವರು ರೇ೦ಜಿನಲ್ಲಿ ಯಾರು ಯಾರು ಇದ್ದಾರೆ ? ಹೇಳು?

'ನಾನು ಅವರ ಮನಸ್ಸುಗಳನ್ನೆಲ್ಲ ಒಳಹೊಕ್ಕು ಪರೀಕ್ಷಿಸಿಲ್ಲ. ತಿಮ್ಮರಾಯಪ್ಪ ! ಬಹಳ ಜನ ಗ್ರಾಮಾಂತರಗಳಲ್ಲಿ ನನ್ನ ಬಗ್ಗೆ ವಿಶ್ವಾಸ ಮತ್ತು ಗೌವಗಳನ್ನಿಟ್ಟಿದ್ದಾರೆ ; ಹೋದಾಗೆಲ್ಲ ಆದರಿಸುತ್ತಾರೆ. ಮುಖ್ಯವಾಗಿ ರಂಗನಾಥಪುರದ ಗಂಗೇಗೌಡರು, ಆವಲಹಳ್ಳಿಯ ದೊಡ್ಡಬೋರೇಗೌಡರು ನನಗೆ ಆಪ್ತರೆಂದು ತಿಳಿದುಕೊಂಡಿದ್ದೇನೆ.'

'ಅವರು ನಮ್ಮ ಜನರಲ್ಲಿ ಭಾರೀ ಕುಳಗಳು ರಂಗಣ್ಣ ! ನನಗೆ ಬಹಳ ಸಂತೋಷ. ಇವರಿಗೆ ವರ್ತಮಾನ ಕೊಡು. ಆಮೇಲೆ ಪೊಲೀಸ್ ಇನ್ ಸ್ಪೆಕ್ಟರನ್ನು ಗುಟ್ಟಾಗಿ ಕಂಡು ಮಾತನಾಡು. ನಿನ್ನ ಕಚೇರಿಯ ಹತ್ತಿರ, ಮನೆಯ ಹತ್ತಿರ ಕಾನ್ಸ್ಟೇಬಲ್ಲುಗಳನ್ನು ಅವರು ಕಾವಲು ಹಾಕುತ್ತಾರೆ. ಉಗ್ರಪ್ಪನ ಓಡಾಟಗಳನ್ನು ಗಮನದಲ್ಲಿಡಲು ಗುಪ್ತಚಾರರನ್ನು ಬೆನ್ನ ಹಿಂದೆ ಹಾಕುತ್ತಾರೆ. ನೀನು ಆರ್ಡರನ್ನು ಹೊರಡಿಸಿದ ಕೂಡಲೆ ನನಗೆ ವರ್ತಮಾನಕೊಡು. ಒಂದು ತಿಂಗಳ ಕಾಲ ಸರ್ಕಿಟು ರದ್ದು ಮಾಡು, ಆಮೇಲೆ ಆಲೋಚನೆ ಮಾಡೋಣ.?

'ನೀನು ಹೇಳಿದ್ದೆಲ್ಲ ಸರಿ ತಿಮ್ಮರಾಯಪ್ಪ ! ಆದರೆ, ಹೆದರಿಕೊಂಡು ಸರ್ಕೀಟನ್ನು ಮಾತ್ರ ನಾನು ರದ್ದು ಮಾಡುವುದಿಲ್ಲ. ಉಳಿದ ಎಲ್ಲ ಸಲಹೆಗಳ೦ತೆ ನಡೆಯುತ್ತೇನೆ. ಸಿದ್ದಪ್ಪನವರನ್ನು ಭೇಟಿ ಮಾಡಿಸುತ್ತೇನೆಂದು ಹಿಂದೆ ಬರೆದಿದ್ದೆಯಲ್ಲ, ಅವರೇಕೆ ಇಲ್ಲಿಗೆ ಬರಲಿಲ್ಲ ?'

'ಆತನಿಗೆ ಊರು ಬಿಟ್ಟು ಹೋಗುವ ಜರೂರು ಕೆಲಸ ಗಂಟುಬಿತ್ತು. ಹೋಗಿದ್ದಾನೆ ; ನಾಳೆ ನಾಳಿದ್ದರಲ್ಲಿ ಬರುತ್ತಾನೆ. ಆತ ಮೇಲಿನವರನ್ನೆಲ್ಲ ಕಂಡು ಮಾತಾಡಿದ್ದಾನೆ. ಧೈರ್ಯವಾಗಿರು ; ಮೇಲಿನವರು ದಡ್ಡರೇನಲ್ಲ ; ಅವರಿಗೂ ನಿಜಾಂಶಗಳು ತಿಳಿದಿದೆ. ಅವರೆಲ್ಲ ಉಪಾಯದಿಂದ ವರ್ತಿಸುತ್ತಾರೆ.'