ಪುಟ:ರಂಗಣ್ಣನ ಕನಸಿನ ದಿನಗಳು.pdf/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೆಂಗಳೂರಿನಲ್ಲಿ

೨೫೧

'ನಿನ್ನ ಸಿದ್ದಪ್ಪ ಎಂತಹ ಮನುಷ್ಯ ? ನನಗಂತೂ ಆತನ ಪರಿಚಯವೇ ಇಲ್ಲ. ನನ್ನ ವಿಚಾರದಲ್ಲಿ ಆತನು ಆಸಕ್ತಿ ವಹಿಸುತ್ತಾನೆಯೇ ? ಎಂದು ನನಗೆ ಸಂದೇಹವಿದೆ !

'ಆತ ಒಳ್ಳೆಯ ಮನುಷ್ಯ ! ಆಲೋಚನೆಮಾಡ ಬೇಡ. ಸ್ವಜನಾಭಿಮಾನ ಸ್ವಲ್ಪ ಇದೆ. ಆದರೆ ನೀಚತನ ಇಲ್ಲ. ಕಲ್ಲೇಗೌಡ, ಕರಿಯಪ್ಪ ಮುಂತಾದವರ ದುರ್ವಿದ್ಯೆಗಳು ಆತನಿಗೆ ಸರಿಬೀಳುವುದಿಲ್ಲ.'

ತಿಂಡಿ ಮುಗಿಯಿತು, ಮಾತೂ ಮುಗಿಯಿತು.

'ನಾನು ನನ್ನ ತಂಗಿಯ ಮನೆಗೆ ಹೋಗಬೇಕು. ಊಟ ಬೇಕಾಗಿಲ್ಲ ; ಹೊಟ್ಟೆ ಭರ್ತಿ ಯಾಗಿದೆ. ಆದರೆ ನನಗಾಗಿ ಆಕೆ ಏನಾದರೂ ಬಿಸಿ ಅಡುಗೆ ಮಾಡಿಟ್ಟುಕೊಂಡಿದ್ದರೆ ಆಗ ಹೊಟ್ಟೆಗೆ ಸ್ವಲ್ಪ ತ್ರಾಸ ಕೊಡ ಬೇಕಾದೀತು !' ಎಂದು ಹೇಳುತ್ತ ರಂಗಣ್ಣ ಎದ್ದು ನಿಂತುಕೊಂಡನು.

'ಒಳ್ಳೆಯದು ! ಹೊರಡು ರಂಗಣ್ಣ ! ಪೊಲೀಸ್ ಇನ್ಸ್ಪೆಕ್ಟರನ್ನು ಕ೦ಡು ಮುಂದಾಗಿ ಏರ್ಪಾಟು ಮಾಡಿಕೋ. ನನಗೆ ಆದಷ್ಟು ಬೇಗ ವರ್ತಮಾನ ಕೊಡು. ಬಹಳ ಎಚ್ಚರಿಕೆಯಿಂದ ಇರು ' ಎಂದು ಹೇಳಿ ಬೆನ್ನು ತಟ್ಟಿ ತಿಮ್ಮರಾಯಪ್ಪ ಗೇಟಿನವರೆಗೂ ಜೊತೆಯಲ್ಲಿ ಬಂದು ರಂಗಣ್ಣನನ್ನು ಬೀಳ್ಕೊಟ್ಟನು.