ಪುಟ:ರಂಗಣ್ಣನ ಕನಸಿನ ದಿನಗಳು.pdf/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೨೪

ಉಗ್ರಪ್ಪನ ಸನ್ ಪೆನ್ ಶನ್

ಜನಾರ್ದನಪುರಕ್ಕೆ ಹಿಂದಿರುಗಿದ ಮೇಲೆ ರಂಗಣ್ಣ ಪೊಲೀಸ್ ಇನ್ ಸ್ಪೆಕ್ಟರ ಮನೆಗೆ ಹೋಗಿ ಪಾಠಶಾಲೆಯಲ್ಲಿ ನಡೆದುದನ್ನೆಲ್ಲ ತಿಳಿಸಿದನು. ಆ ಉಗ್ರಪ್ಪನ ವಿಚಾರದಲ್ಲಿ ಸಸ್ಪೆಂಡ್ ಮಾಡುವ ತೀವ್ರವಾದ ಕಾರ್ಯಕ್ರಮವನ್ನು ತೆಗೆದುಕೊಳ್ಳ ಬೇಕಾಗಿರುವುದೆಂದೂ, ಅದಕ್ಕೆ ಪ್ರತಿಕ್ರಿಯೆಯಾಗಿ ಅವನು ಪುಂಡಾಟ ನಡೆಸದಂತೆ ಕ್ರಮ ಕೈಗೊಳ್ಳಬೇಕೆಂದೂ ತಿಳಿಸಿದನು. ಪೊಲೀಸ್ ಇನ್ಸ್ಪೆಕ್ಟರು, " ನೋಡಿ ರಂಗಣ್ಣನವರೇ ! ಆ ಮನುಷ್ಯನ ಮೇಲೆ ಬಹಳ ಪುಕಾರುಗಳಿವೆ. ನಾವು ಕೆಟ್ಟ ದಾರಿಗೆ ಹೋಗಬಾರದು, ನಿಮ್ಮ ಇಲಾಖೆಯವರಿಗೆ ತಿಳಿಸಿ ಬಂದೋ ಬಸ್ತು ಮಾಡೋಣ ಎಂದು ಎರಡು ಮೂರು ಸಲ ಪ್ರಯತ್ನ ಪಟ್ಟೆವು, ಪ್ರಯೋಜನವಾಗಲಿಲ್ಲ. ನಿಮ್ಮ ಇಲಾಖೆಯವರೇ ಅವನನ್ನು ವಹಿಸಿಕೊಂಡು ಬಂದರು ; ಜನಾರ್ದನ ಪುರದಲ್ಲಿಯೇ ಇಟ್ಟರು. ಈಗ ನೀವೇನೋ ಸಸ್ಪೆಂಡ್ ಮಾಡುತ್ತೇನೆ, ಮುಂದೆ ಈ ರೇಂಜ್ ಮಾತ್ರವಲ್ಲ, ಈ ಡಿಸ್ಪಿ ಕೈ ತಪ್ಪಿಸಿ ವರ್ಗ ಮಾಡಿಸುತ್ತೇನೆ ಎಂದು ಹೇಳುತ್ತಿದ್ದೀರಿ. ಆಗಲಿ ನೋಡೋಣ. ನನ್ನ ಕೈಯಲ್ಲಾದ ಸಹಾಯ ಮಾಡುತ್ತೇನೆ. ಆದರೆ ನೀವು ನನಗೆ ಒಂದು ರಹಸ್ಯ ದ ಕಾಗದ ಬರೆದು ಸಹಾಯಬೇಕೆಂದು ಕೇಳಬೇಕು, ಯಾವುದೊಂದು ದಾಖಲೆಯೂ ಇಲ್ಲದೆ ನಾನು ಜವಾಬ್ದಾರಿ ತೆಗೆದುಕೊಳ್ಳಲಾರೆ' ಎಂದು ತಿಳಿಸಿದರು. ಆಗಲಿ, ಬರೆದು ಕಳಿಸುತ್ತೇನೆ' ಎಂದು ಹೇಳಿ ರಂಗಣ್ಣ ಹೊರಟು ಬಂದನು.

ಒಂದು ವಾರವಾಯಿತು. ಉಗ್ರಪ್ಪನಿಂದ ಇನ್ಸ್ಪೆಕ್ಟರಿಗೆ ನೇರವಾಗಿ ಒಂದು ಕಾಗದ ಬಂತು. ಅದರಲ್ಲಿ, 'ನೀವು ಹೆಡ್‌ಮೇಷ್ಟರ ಚಾಡಿ ಮಾತುಗಳನ್ನು ಕೇಳಿಕೊಂಡು ನನ್ನ ಮೇಲೆ ಇಲ್ಲದ ಆರೋಪಣೆಗಳನ್ನು ಹೊರಿಸಿ ಸಮಜಾಯಿಷಿ ಕೇಳಿದ್ದೀರಿ, ನಾನು ನಿರಪರಾಧಿ' ಎಂದು ಬರೆದಿತ್ತು.