ಪುಟ:ರಂಗಣ್ಣನ ಕನಸಿನ ದಿನಗಳು.pdf/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉಗ್ರಪ್ಪನ ಸನ್ ಪೆನ್ ಶನ್

೨೫೨

ರಂಗಣ್ಣ ಅದನ್ನು ಕಡತಕ್ಕೆ ಸೇರಿಸಿ ಕಚೇರಿಯನ್ನು ಬಿಟ್ಟು ಪ್ರೈಮರಿ ಸ್ಕೂಲಿಗೆ ಹೊರಟನು. ಹೆಡ್ ಮಾಸ್ಟರ ಕೊಟಡಿಯಲ್ಲಿ ಕುಳಿತುಕೊಂಡು ಉಪಾಧ್ಯಾಯಯರ ಹಾಜರಿ ರಿಜಿಸ್ಟರ್ ಮೊದಲಾದ ದಾಖಲೆಗಳನ್ನು ನೋಡುತ್ತಿದ್ದಾಗ ಉಗ್ರಪ್ಪ ಅಲ್ಲಿಗೆ ಬಂದು ನಿಂತುಕೊಂಡನು. ಇನ್ ಸ್ಪೆಕ್ಟರಿಗೆ ನಮಸ್ಕಾರವನ್ನೆನೂ ಮಾಡಲಿಲ್ಲ. ಕಣ್ಣುಗಳನ್ನು ಅಗಲವಾಗಿ ಅರಳಿಸಿಕೊಂಡು ಇನ್ಸ್ಪೆಕ್ಟರನ್ನು ನೋಡಿದನು.

'ಏನು ಉಗ್ರಪ್ಪನವರೇ ! ಹಾಗೇಕೆ ಕಣ್ಣರಳಿಸಿ ನನ್ನನ್ನು ನುಂಗುವ ಹಾಗೆ ನೋಡುತ್ತೀರಿ? '

'ನನ್ನನ್ನು ಅವಿಧೇಯನೆಂದು ಹೇಳೋಣಾಯಿತು. ನನ್ನ ಸಮಜಾಯಿಷಿ ಕೇಳೋಣಾಯಿತು ! ಆ೦ಥ ಮಹಾಪುರುಷರನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು ! ಇರುವ ಕಣ್ಣುಗಳನ್ನೇ ದೊಡ್ಡದು ಮಾಡಿಕೊಂಡು ನೋಡುತ್ತಿದೇನೆ !'

'ಹಾಗೆಲ್ಲ ಒರಟೊರಟಾಗಿ ಮಾತನಾಡಬಾರದು, '

'ಮಾತನಾಡುವ ರೀತಿಯನ್ನು ತಮ್ಮಿಂದ ಕಲಿಯಬೇಕಾಗಿಲ್ಲ. '

'ಇದು ಅವಿಧೇಯ ವರ್ತನೆ ! ಸಭ್ಯತೆಯಿಂದ ನಡೆದುಕೊಳ್ಳಿ ! '

'ರೂಲ್ಸು ರೆಗ್ಯುಲೇಷನು ತಿಳಿಯದೆ ಕಾರುಬಾರು ಮತ್ತು ದಬ್ಬಾಳಿಕೆ ನಡೆಸುವ ದರ್ಪದವರಿಗೆಲ್ಲ ನಾನು ಅವಿಧೇಯನೇ ! ನೀವು ಬೇಕಾದ್ದು ಮಾಡಿಕೊಳ್ಳಿ. ನಾನೂ ನಿಮಗೆ ತಕ್ಕದ್ದನ್ನು ಮಾಡುವ ಶಕ್ತಿ ಪಡೆದಿದ್ದೇನೆ. ಶೀಘ್ರದಲ್ಲಿಯೇ ಅದು ನಿಮ್ಮ ಅನುಭವಕ್ಕೆ ಬರುತ್ತದೆ.'

ರಂಗಣ್ಣ ಮುಂದೆ ಮಾತಾಡದೆ ಕಚೇರಿಗೆ ಹೊರಟುಬಂದನು. ಸಸ್ಪೆಂಡ್ ಮಾಡಿರುವ ಆರ್ಡರನ್ನು ಹೊರಡಿಸಿ, ಪೊಲೀಸ್ ಇನ್ಸ್ಪೆಕ್ಟರಿಗೂ ಕಾಗದವನ್ನು ಬರೆದು ಆಳುಗಳ ಮೂಲಕ ಮುದ್ದಾಂ ಕಳಿಸಿಕೊಟ್ಟನು. ಸುಮಾರು ಒಂದು ಗಂಟೆಯೊಳಗಾಗಿ ಜನಾರ್ದನ ಪುರದಲ್ಲೆಲ್ಲ ದೊಡ್ಡ ಕೋಲಾಹಲವುಂಟಾಯಿತು! ಬೆಳಗ್ಗೆ ಹತ್ತೂವರೆ ಗಂಟೆಯಾಗಿದ್ದುದರಿಂದ ಪಾಠಶಾಲೆಯನ್ನು ಬಿಟ್ಟು ಬಿಟ್ಟಿದ್ದರು. ಆದರೆ, ಅದರ ಹತ್ತಿರ ಜನ ಗುಂಪು ಕಟ್ಟಿತ್ತು ಪೊಲೀಸ್ ಕಾನ್ ಸ್ಟೇಬಲ್ಲುಗಳು ಜನರನ್ನು ಬೆದರಿಸುತ್ತ ಇದ್ದರು. ಉಗ್ರಪ್ಪ ನು ತನಗೆ ಇನ್ಸ್ಪೆಕ್ಟರು ಹಿಂದಿನವರಂತೆ ಹೆದರಿ