ಪುಟ:ರಂಗಣ್ಣನ ಕನಸಿನ ದಿನಗಳು.pdf/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೫೪

ರಂಗಣ್ಣನ ಕನಸಿನ ದಿನಗಳು

ಕೊಳ್ಳುವರೆಂದೂ ದಂಡನೆ ಇತ್ಯಾದಿಗಳ ಗೋಜಿಗೆ ಹೋಗದೆ ವರ್ಗಕ್ಕೆ ಮಾತ್ರ ಶಿಫಾರಸು ಮಾಡಬಹುದೆಂದೂ ತಿಳಿದುಕೊಂಡು ಧೈರ್ಯವಾಗಿದ್ದನು. ಆದರೆ ಹಠಾತ್ತಾಗಿ ಸಸ್ಪೆಂಡ್ ಮಾಡಿದ ಆರ್ಡರು ಬಂದು ಹೆಡ್ಮಾಸ್ಟರು ಅದನ್ನು ಓದಿ ಹೇಳಿ ಅದರ ನಕಲನ್ನು ಕೈಗೆ ಕೊಟ್ಟಾಗ ಕ್ಷಣಕಾಲ ಸ್ತಬ್ದನಾಗಿ ನಿಂತುಬಿಟ್ಟನು ! ಬಳಿಕ ಮಹಾ ಕೋಪದಿಂದ ಹೆಡ್ ಮೇಷ್ಟರ ಮೇಲೆ ಬಿದ್ದು ಹೊಡೆಯುವುದಕ್ಕೆ ಹೋದನು. ಆ ಹೆಡ್ ಮೇಷ್ಟ್ರು ಬೀದಿಗೆ ಓಡಿ ಬಂದು ಕಿರಿಚಿಕೊಂಡನು ! ಜನ ಸೇರಿಬಿಟ್ಟರು. ಅಷ್ಟರಲ್ಲಿ ದಫೇದಾರನೊಬ್ಬನು ನಾಲ್ಕು ಜನ ಕಾನಿಸ್ಟೇಬಲ್ಲುಗಳೊಡನೆ ಅಲ್ಲಿಗೆ ಬಂದನು. ಉಗ್ರಪ್ಪನಿಗೆ ಸಸ್ಪೆಂಡ್ ಆಗಿರುವ ವಿಚಾರ, ಅವನು ಹೆಡ್‌ಮೇಷ್ಟರನ್ನು ಹೊಡೆಯಹೋದುದು, ಪೊಲೀಸಿನವರು ಬಂದುದು - ಎಲ್ಲವೂ ಊರಿನಲ್ಲಿ ಹರಡಿ ಹೋಯಿತು ! ದಫೇದಾರನು ಉಗ್ರಪ್ಪನನ್ನು ಸಮಾಧಾನಗೊಳಿಸಿ, ಪಾಠಶಾಲೆಯ ಹತ್ತಿರ ಗಲಾಟೆ ಮಾಡದೆ ಹೊರಟುಹೋಗ ಬೇಕೆಂದು ತಿಳಿಸಿದನು ; ಏನಾದರೂ ಹೇಳಿಕೊಳ್ಳುವ ಅಹವಾಲಿದ್ದರೆ ಇನ್ಸ್ಪೆಕ್ಟರ್ ಸಾಹೇಬರ ಹತ್ತಿರ ಹೋಗಬಹುದೆಂದು ಬುದ್ಧಿ ಹೇಳಿದನು ; ಬೀದಿಯಲ್ಲಿ ಏನಾದರೂ ಮಾರಾಮಾರಿ ನಡೆಸಿ ಶಾಂತಿಭಂಗ ಮಾಡುವುದಾದರೆ ದಸ್ತಗಿರಿ ಮಾಡಿ ಪೊಲೀಸ್ ಸ್ಟೇಷನ್ನಿಗೆ ಕರೆದುಕೊಂಡು ಹೋಗುವುದಾಗಿ ಬೆದರಿಸಿದನು. ಮುನಿಸಿಪಲ್ ಕೌನ್ಸಿಲರಾದ ಚೆನ್ನಪ್ಪ ಮತ್ತು ಇತರರು ಉಗ್ರಪ್ಪನನ್ನು ಸಮಾಧಾನಗೊಳಿಸಿ ಕಚೇರಿಯ ಬಳಿಗೆ ಹೋಗೋಣ ಎಂದು ಕರೆದುಕೊಂಡು ಹೊರಟರು. ಹಿಂದೆ ಜನರ ಗುಂಪೂ ಹೊರಟಿತು. ಆದರೆ ಕಚೇರಿಯ ಹತ್ತಿರ ಇಬ್ಬರ ಕಾನ್ ಸ್ಟೇಬಲ್ಲುಗಳು ಮಾತ್ರ ಇದ್ದರು. ಇನ್ಸ್ಪೆಕ್ಟರು ಮನೆಗೆ ಹೊರಟು ಹೋಗಿದ್ದರು. ಆದ್ದರಿಂದ ಚೆನ್ನಪ್ಪನೂ ಉಗ್ರಪ್ಪನೂ ರಂಗಣ್ಣನ ಮನೆಯ ಕಡೆಗೆ ಹೊರಟರು. ಪೇಟೆಯ ಬೀದಿಗಳಲ್ಲಿ ಜನರ ಗುಂಪು ಹಿಂದೆ ಹಿಂದೆ ಹೋಗುತ್ತಿದ್ದುದರಿಂದ ಸಸ್ಪೆಂಡ್ ಆಗಿರುವ ವಿಚಾರವನ್ನು ಬೇರೆ ರೀತಿಗಳಲ್ಲಿ ಪ್ರಕಟ ಮಾಡಬೇಕಾಗಿಯೇ ಇರಲಿಲ್ಲ ! ಕಡೆಗೆ ಕೆರೆಯ ಹತ್ತಿರ ಪಾತ್ರೆಗಳನ್ನು ಬೆಳಗುತ್ತಿದ್ದ ಮತ್ತು ಬಟ್ಟೆಗಳನ್ನು ಒಗೆಯುತ್ತಿದ್ದ ಹೆಂಗಸರಿಗೂ ಆ ವರ್ತಮಾನ ಮುಟ್ಟಿತು ; ದೇವಸ್ಥಾನಗಳಲ್ಲಿ ಪೂಜೆ ಮಾಡುತ್ತಿದ್ದ