ಪುಟ:ರಂಗಣ್ಣನ ಕನಸಿನ ದಿನಗಳು.pdf/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೫೬

ರಂಗಣ್ಣನ ಕನಸಿನ ದಿನಗಳು

ಅವಕಾಶ ದೊರೆಯುವುದೆಂದು ನಿಷ್ಕರ್ಷೆ ಮಾಡಿಕೊಂಡು ಮಾರನೆಯ ದಿನ ಇಬ್ಬರೂ ಸಾಹೇಬರ ಕಚೇರಿಗೆ ಹೋಗಿ ಆಹವಾಲನ್ನು ಹೇಳಿಕೊಂಡರು. ಸಾಹೇಬರು ರಂಗಣ್ಣನನ್ನು ಚೆನ್ನಾಗಿ ಬಲ್ಲವರು. ಹಿಂದೆ ರಂಗನಾಥಪುರದ ಸಂಘದ ಸಭೆಯಲ್ಲಿ ಸಾಕ್ಷಾತ್ತಾಗಿ ರಂಗಣ್ಣನ ಕೆಲಸವನ್ನೂ ದಕ್ಷತೆಯನ್ನೂ ಪಾಂಡಿತ್ಯವನ್ನೂ ಆತ ಸಂಪಾದಿಸಿದ್ದ ಜನಾನುರಾಗವನ್ನೂ ನೋಡಿ ಮೆಚ್ಚಿ ಕೊಂಡಿದ್ದವರು. ಎರಡನೆಯದಾಗಿ, ಚೆನ್ನಪ್ಪನ ಮತ್ತು ಉಗ್ರಪ್ಪನ ಪೂರ್ವ ಚರಿತ್ರೆಗಳನ್ನೆಲ್ಲ ತಿಳಿದುಕೊಂಡಿದ್ದವರು. ಆದ್ದರಿಂದ ಅವರು ಮಾಡಿದ ಅಹವಾಲುಗಳಿಂದ ಅಷ್ಟೇನೂ ಪ್ರಯೋಜನವಾಗಲಿಲ್ಲ. ಸಾಹೇಬರು,

'ಸಸ್ಪೆಂಡ್ ಮಾಡುವ ಅಧಿಕಾರ ಇನ್ಸ್ಪೆಕ್ಟರಿಗೆ ಇದೆ. ಒಂದು ತಿಂಗಳು ಕಾಲ ಸಸ್ಪೆಂಡ್ ಮಾಡಬಹುದು. ಈಚೆಗೆ ಆ ವಿಚಾರಗಳಲ್ಲೆಲ್ಲ ಸರ್ಕಾರದ ಆರ್ಡರ್ ಆಗಿದೆ. ಆದ್ದರಿಂದ ನಾನು ಮಧ್ಯೆ ಪ್ರವೇಶಿಸುವ ಹಾಗಿಲ್ಲ. ಅವರಿಂದ ರಿಪೋರ್ಟು ಬಂದಮೇಲೆ ಕೇಸಿನ ವಿಮರ್ಶೆಮಾಡಿ ಯುಕ್ತವಾದುದನ್ನು ನಾನು ಮಾಡಬಹುದು. ನೀವುಗಳು ಅರ್ಜಿ ಕೊಟ್ಟರೆ ಅದನ್ನು ಇನ್ಸ್ಪೆಕ್ಟರಿಗೆ ಕಳಿಸಿ ವರದಿಯನ್ನು ತರಿಸಿಕೊಳ್ಳುತ್ತೇನೆ' ಎಂದು ಹೇಳಿದರು.

'ಇದು ಬಹಳ ಅನ್ಯಾಯ ಸ್ವಾಮಿ ! ವಿಚಾರಣೆಯಿಲ್ಲದೆ ಏಕದಂ ಸಸ್ಪೆಂಡ್ ಮಾಡಿಬಿಟ್ಟಿದ್ದಾರೆ! ತಾವು ಖುದ್ದು ಬಂದು ವಿಚಾರಣೆ ಮಾಡುವುದಾಗಿಯೂ ಅಲ್ಲಿಯವರೆಗೆ ಸಸ್ಪೆನ್ಷನ್ ಆರ್ಡರನ್ನು ತಡೆದಿಟ್ಟರಬೇಕೆಂದೂ ಒಂದು ಕಾಗದವನ್ನಾದರೂ ಬರೆದು ನಮ್ಮ ಕೈಗೆ ಕೊಡಿ. ನಾನು ಜವಾಬ್ದಾರಿಯ ಮನುಷ್ಯ ; ಜನಾರ್ದನಪುರದ ಮುನಿಸಿಪಲ್ ಕೌನ್ಸಿಲರು ! ಕಲ್ಲೇಗೌಡರು, ಕರಿಯಪ್ಪನವರು ನಮ್ಮ ಮುಖಂಡರು ! ಅವರಿಗೂ ಈ ವರ್ತಮಾನ ಕೊಟ್ಟಿದ್ದೇವೆ. ಇಂದೋ ನಾಳೆಯೋ ಇನ್ ಸ್ಪೆಕ್ಟರ ಆರ್ಡರ್ ರದ್ದಾಗಿ ಅವರಿಗೆ ತಕ್ಕ ಶಾಸ್ತಿಯಾಗುತ್ತದೆ !'

'ಮಧ್ಯೆ ನಾನು ಪ್ರವೇಶಿಸುವಹಾಗಿಲ್ಲ ಚೆನ್ನಪ್ಪನವರೇ ! ಇನ್ ಸ್ಪೆಕ್ಟರಿಗೆ ಅಧಿಕಾರವಿರುವಾಗ ನಾನು ಕೈ ಹಾಕಬಾರದು. '