ಪುಟ:ರಂಗಣ್ಣನ ಕನಸಿನ ದಿನಗಳು.pdf/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬೦

ರಂಗಣ್ಣನ ಕನಸಿನ ದಿನಗಳು

ಬಿಟ್ಟೆ. ನಿನಗೆ ಹೇಗೆ ಕಾಗದ ಬರೆಯಲಿ ? ಬರೆದಿದ್ದರೆ ತಾನೆ ಏನು ? ಇನ್ನು ಎರಡು ಗಂಟೆಯಮೇಲೆ ನಿನ್ನ ಕೈ ಸೇರುತ್ತಿತ್ತು. ಕಾಗದಕ್ಕಿಂತ ಮೊದಲೇ ನಿನ್ನ ಮನೆಯಲ್ಲಿ ನಾವಿದ್ದೇವೆ ನೋಡು ! ಈ ಜನಾರ್ದನಪುರ ದಲ್ಲಿ ನಿನ್ನ ಮನೆ ಪತ್ತೆ ಮಾಡುವುದು ಏನು ಕಷ್ಟ ? ಯಾರ ಮನೆ ಮುಂದೆ ಕಾನ್ ಸ್ಟೇಬಲ್ಲುಗಳಿದ್ದಾರೆ ? ಹೇಳು ' ಎಂದು ನಗುತ್ತಾ ತಿಮ್ಮರಾಯಪ್ಪ ಕೇಳಿದನು.

'ಕಲ್ಲೇಗೌಡ ಮತ್ತು ಕರಿಯಪ್ಪ ಬಂದಿದ್ದಾರೆಯೇ ? ನಿಮ್ಮನ್ನೇನಾದರೂ ಬಂದು ಕಂಡರೇ ? ' ಎಂದು ಸಿದ್ದಪ್ಪ ಕೇಳಿದನು.

'ಅವರು ಈ ಊರಿಗೆ ಬಂದಿದ್ದಾರೆ. ಇಲ್ಲಿಯ ಮುನಿಸಿಪಲ್ ಕೌನ್ಸಿಲರ್ ಚೆನ್ನಪ್ಪ ನವರ ಮನೆಯಲ್ಲಿ ಇಳಿದುಕೊಂಡಿದ್ದಾರೆ. ನನ್ನನ್ನು ಕಾಣಲು ಅವರು ಬರಲಿಲ್ಲ. ?

'ಏನೇನು ನಡೆಯಿತು ? ವಿವರವಾಗಿ ತಿಳಿಸು ' ಎಂದು ತಿಮ್ಮರಾಯಪ್ಪ ಕೇಳಿದನು.

'ಎಲ್ಲ ಸಮಾಚಾರಗಳನ್ನೂ ನಿಧಾನವಾಗಿ ತಿಳಿಸುತ್ತೇನೆ. ಮೊದಲು ಕೈ ಕಾಲು ಮುಖಗಳನ್ನಾದರೂ ತೊಳೆದು ಕೊಂಡು ಕಾಫಿ ತೆಗೆದುಕೊಳ್ಳಿ, ನೀನು ಮಾಡುತ್ತಿದ್ದಂತೆ ಭಾರಿ ಸಮಾರಾಧನೆ ಮಾಡಲು ಶಕ್ತಿಯಿಲ್ಲ ! ಏನೋ ಕೈಲಾದಷ್ಟು ಆತಿಥ್ಯ ಮಾಡುತ್ತೇನೆ ! ” ಎಂದು ಹೇಳಿ ಅವರ ಕೈಗೆ ಟವಲ್ಲುಗಳನ್ನು ಕೊಟ್ಟು ನೀರ ಮನೆಗೆ ಕರೆದುಕೊಂಡು ಹೋದನು. ಅಲ್ಲಿಂದ ಹಿಂದಿರುಗುವ ವೇಳೆಗೆ ಕೊಟಡಿಯಲ್ಲಿ ಉಪಾಹಾರ ಸಿದ್ಧವಾಗಿತ್ತು : ಬೆಳ್ಳಿಯ ತಟ್ಟೆಗಳಲ್ಲಿ ಉಪ್ಪಿಟ್ಟು, ಬೋಂಡ, ಮೈಸೂರು ಪಾಕು ಮತ್ತು ಓಮ ಪುಡಿ ; ಬೆಳ್ಳಿಯ ಲೋಟಗಳಲ್ಲಿ ನೀರು ಮತ್ತು ಕಾಫಿ. ಆ ಹೊತ್ತಿಗೆ ದೊಡ್ಡ ಬೋರೇಗೌಡರೂ ಗಂಗೇಗೌಡರೂ ಗೇಟು ತೆಗೆದು ಒಳಕ್ಕೆ ಬರುತ್ತಿದ್ದರು. ರಂಗಣ್ಣ ಅವರನ್ನು ಎದುರುಗೊಂಡು ಸ್ವಾಗತವನ್ನು ನೀಡಿ ಕೊಟಡಿಗೆ ಕರೆದುಕೊಂಡು ಬಂದನು. ಇನ್ನೆರಡು ತಟ್ಟೆಗಳಲ್ಲಿ ಉಪಾಹಾರ ಬಂದು ಕುಳಿತುಕೊಂಡಿತು.

'ಏನು ಸ್ವಾಮಿ ! ಇಲ್ಲಿಯ ಸಂಘದ ಸಭೆ ಸೇರಿಸಿರುವಂತೆ ಕಾಣು ಇದೆಯಲ್ಲ!' ಎಂದು ದೊಡ್ಡ ಬೋರೇಗೌಡರು ನಗುತ್ತ ಕೇಳಿದರು.