ಪುಟ:ರಂಗಣ್ಣನ ಕನಸಿನ ದಿನಗಳು.pdf/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೨೫

ನಾಗೇನಹಳ್ಳಿಯಲ್ಲಿ ಪ್ರಾರಂಭೋತ್ಸವ

ಕಲ್ಲೇಗೌಡನೂ ಕರಿಯಪ್ಪನೂ ಜನಾರ್ದನಪುರದಲ್ಲಿ ಎರಡು ದಿನಗಳಿದ್ದು ತಂತಮ್ಮ ಊರುಗಳಿಗೆ ಹಿಂದಿರುಗಿದರು. ಸಿದ್ಧಪ್ಪ ತಮಗೆ ಪ್ರತಿಕಕ್ಷಿಯಾಗಿದ್ದಾನೆಂದೂ, ದಿವಾನರಿಗೆ ತಮ್ಮ ವಿಚಾರಗಳನ್ನೆಲ್ಲ ಅವನು ತಿಳಿಸಿದ್ದಾನೆಂದೂ ಅರಿವಾದ ಮೇಲೆ ಆ ಮುಖಂಡರಿಬ್ಬರ ಹುರುಪು ಬಹುಮಟ್ಟಿಗೆ ಇಳಿದು ಹೋಯಿತು. ಆದರೆ ಇನ್ ಸ್ಪೆಕ್ಟರ ವಿಚಾರದಲ್ಲಿ ಛಲವೇನೂ ಕಡಮೆಯಾಗಲಿಲ್ಲ. ಬಹಿರಂಗವಾಗಿ ಪ್ರತಾಪಗಳನ್ನು ಕೊಚ್ಚಿಕೊಳ್ಳುವ ಬದಲು ಅಂತರಂಗವಾಗಿ ಕೆಡುಕನ್ನು ಬಗೆಯುತ್ತ, ಉಗ್ರಪ್ಪನಿಗೆ ಸ್ವಲ್ಪ ಸಮಾಧಾನ ಹೇಳಿ ಅವರು ಹೊರಟುಹೋದರು. ಅವರು ತೊಲಗಿಹೋದ ಮಾರನೆಯ ದಿನ ಸಿದ್ದಪ್ಪನೂ ತಿಮ್ಮರಾಯಪ್ಪನೂ ಬೆಂಗಳೂರಿಗೆ ಹೊರಡಲು ಸಿದ್ಧರಾದರು. ಆ ಅವಧಿಯಲ್ಲಿ ಸಿದ್ದಪ್ಪ ಅಮಲ್ದಾರರನ್ನೂ ಪೊಲೀಸ್ ಇನ್ಸ್ಪೆಕ್ಟರನ್ನೂ ಭೇಟಿ ಮಾಡಿದ್ದನು. ರಂಗಣ್ಣನಿಗೆ ಮೂರು ದಿನಗಳಿಂದ ಮನೆ ತುಂಬಿದಂತೆ ಇತ್ತು ; ಸ್ನೇಹಿತರೊಡನೆ ಸರಸ ಸಲ್ಲಾಪಗಳು, ತಿಂಡಿಗಳು, ಔತಣಗಳು – ಈ ಸಮಾರಂಭದಲ್ಲಿ ಬಹಳ ಸಂತೋಷವಾಗಿತ್ತು. ಅವರು ಹೊರಟುಹೋದಮೇಲೆ ಮನೆಯಲ್ಲಿ ಕಳೆಯೇ ಇರುವುದಿಲ್ಲವಲ್ಲ ಎಂದು ಚಿಂತಾಕ್ರಾಂತನಾದನು. ಕಡೆಗೆ ರೈಲ್ ಸ್ಟೇಷನ್ನಿಗೆ ಹೊರಟಿದ್ದಾಯಿತು. ರೈಲು ಬರುವ ಹೊತ್ತೂ ಆಯಿತು. ತಿಮ್ಮರಾಯಪ್ಪನು, ' ರಂಗಣ್ಣ ! ನೀನು ಬಹಳ ಎಚ್ಚರಿಕೆಯಿಂದಿರಬೇಕು. ಈಗ ನೀನು ನಿನ್ನ ಹಟವನ್ನೇನೋ ಸಾಧಿಸಿಕೊಂಡೆ ! ಆದರೆ ಅವರು ಬಹಳ ದುಷ್ಟರು, ಪ್ರಬಲರು. ನೀನು ಎರಡು ತಿಂಗಳ ಕಾಲ ರಜ ತೆಗೆದುಕೊಂಡು ಬೆಂಗಳೂರಿಗೆ ಬರುವುದು ಒಳ್ಳೆಯದು. ಒಂದು ವೇಳೆ ನಿನಗೆ ವರ್ಗವಾದರೆ ಮೇಲೆ ಹೋಗಿ ಜಗಳ ಕಾಯಬೇಡ ; ರಾಜೀನಾಮೆ ಕೊಡುತ್ತೇನೆ ಎಂದೆಲ್ಲ ಹೇಳಬೇಡ ; ದುಡುಕಿ ಏನನ್ನೂ ಮಾಡಬೇಡ '