ಪುಟ:ರಂಗಣ್ಣನ ಕನಸಿನ ದಿನಗಳು.pdf/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾಗೇನಹಳ್ಳಿಯಲ್ಲಿ ಪ್ರಾರಂಭೋತ್ಸವ

೨೭೧

ರೈತರು ಬಂದವರೆ ನೋಡಿ ! ಅವರು ಕಸ್ಟಾಪಟ್ಟು ಕೊಂಡು ತಮ್ಮ ಕಾವಲಿಗೆ ಆರು ಮೈಲಿಯಿಂದ ಬಂದವರೆ ! ?

ಯಾವ ವಿಶ್ವವಿದ್ಯಾನಿಲಯದಲ್ಲಿ ಕರಿಹೈದನಂತೆ ಪಾಠ ಹೇಳಿಕೊಡುತ್ತಾರೋ ತಿಳಿಯದು-ಎಂದು ರಂಗಣ್ಣ ಹೇಳಿಕೊಂಡನು.

ರಂಗಣ್ಣನ ಹೆಂಡತಿ, ಕರಿಹೈದ ! ನೀನು ಅವರ ಯೋಚನೆ ಮಾಡಬೇಡಪ್ಪ ! ಸ್ವಲ್ಪ ಗಾಡಿ ನಿಲ್ಲಿಸು ! ' ಎಂದು ಹೇಳಿದಳು. ನಿಂತಿತು. ಗಾಡಿಯ ಹಿಂದೆ ಮುಂದೆ ಕೈದೊಣ್ಣೆಗಳನ್ನು ಹಿಡಿದು ನಡೆಯು ತಿದ್ದ ರೈತರನ್ನು ಆಕೆ ಕರೆದಳು. ಪೆಟ್ಟಿಗೆಯಲ್ಲಿರುವುದನ್ನೆಲ್ಲ ತೆಗೆದು ಅವರಿಗೆ ಹಂಚಿ ಖಾಲಿ ಮಾಡಿ ಬಿಟ್ಟಳು. ಕರಿಹೈದ ಅದನ್ನು ನೋಡಿ, ನಮ್ಗೇ ಎಲ್ಲಾ ಕೊಟ್ಬಿಟ್ಟರಲ್ಲಾ ! ನಿಮಗೆಲ್ಲೈತೆ ಸೋಮಿ ತಿಂಡಿ ?? ಎಂದು ಕೇಳಿದನು, ಆಕೆ, ' ನಮಗೂ ಇದೆಯಪ್ಪ, ಇಲ್ಲಿ ನೋಡು ! ? ಎಂದು ಹೇಳಿ ಚಕ್ಕುಲಿ ಕೋಡಬಳೆಗಳನ್ನು ತೋರಿಸಿದಳು. ಕರಿಹೈದ ಸ್ವಲ್ಪ ಬಾಯಿಗೆ ಹಾಕಿಕೊಂಡು,

'ಇದೇನು ಸೋಮಿ, ನಿಮ್ಮ ತಿಂಡಿ ಹಲ್ಗೆ ಸಿಗೋಕಿಲ್ಲ ! ಬಾಯೊಳಗೇ ನಿಲ್ಲೋಕಿಲ್ಲ ! ಜಗ್ಸಿ ಆಗಿಯೋ ತಿಂಡಿ ಇರಬೇಕು ಸೋಮಿ ಹಳ್ಳಿಯವರಿಗೆಲ್ಲ !' ಎಂದು ಹೇಳಿದನು.

ನಾಗೇನಹಳ್ಳಿ ಸಮಿಾಪಿಸಿತು. ಹಳ್ಳಿಯ ಮುಂದುಗಡೆ ತೋರಣ ಕಟ್ಟಿತ್ತು. ಅಲ್ಲಿ ಮರದ ಕೆಳಗೆ ಹಳ್ಳಿಯ ಜನರು ನಿರೀಕ್ಷಿಸುತ್ತ ನಿಂತಿದ್ದರು. ಗಾಡಿ ಬೆಳಗ್ಗೆ ಹತ್ತು ವರೆ ಗಂಟೆಯ ಹೊತ್ತಿಗೆ ಅಲ್ಲಿಗೆ ಹೋಯಿತು. ರಂಗಣ್ಣ ಮೊದಲಾದವರು ಗಾಡಿಯಿಂದಿಳಿದರು. ಹಳ್ಳಿಯ ಓಲಗ ಪ್ರಾರಂಭವಾಯಿತು. ಜೊತೆಗೆ ತಮಟೆ ಬಾರಿಸುವವರು ಬಾರಿಸುತ್ತಿದ್ದರು ; ಕೊಂಬುಗಳನ್ನು ಕೆಲವರು ಊದಿದರು. ಊರಿನ ಮುಖಂಡರು ಮೂರು ನಾಲ್ಕು ಹೂವಿನ ದೊಡ್ಡ ದೊಡ್ಡ ಹಾರಗಳನ್ನು ರಂಗಣ್ಣನ ಕೊರಳಿಗೆ ಹಾಕಿ ನಮಸ್ಕಾರ ಮಾಡಿದರು. ತಟ್ಟೆಗಳಲ್ಲಿ ತೆಂಗಿನಕಾಯಿ, ಹಣ್ಣು ಮೊದಲಾದುವನ್ನಿಟ್ಟು ಕಾಣಿಕೆ ಸಮರ್ಪಿಸಿದರು. ರಂಗಣ್ಣ ಮುಖಂಡರ ಕುಶಲ ಪ್ರಶ್ನೆಯನ್ನು ಮಾಡಿ ಅವರಿಗೆಲ್ಲ ಹಸ್ತಲಾಘವ ಕೊಟ್ಟು ಮುಗುಳುನಗೆ ಸೂಸುತ್ತ, 'ಅಂತೂ ನಿಮ್ಮ ಹಳ್ಳಿಗೊಂದು ಸರಕಾರಿ ಸ್ಕೂಲಾಯಿತು.