ಪುಟ:ರಂಗಣ್ಣನ ಕನಸಿನ ದಿನಗಳು.pdf/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭೨

ರಂಗಣ್ಣನ ಕನಸಿನ ದಿನಗಳು

ನೀವೆಲ್ಲ ಕರಿಹೈದನಿಗೆ ಕೃತಜ್ಞರಾಗಿರಬೇಕು ? ಎಂದು ಹೇಳಿದನು. ಮುಖಂಡರು,

'ಸೋಮಿ ! ತಮಗೂ ನಾವು ಕೃತಜ್ಞರಾಗಿದ್ದೇವೆ. ಎಷ್ಟೋ ಜನ ಅಧಿಕಾರಿಗಳು ನಮ್ಮ ಬಂಡಿಗಳನ್ನೆಲ್ಲ ಬಿಟ್ಟಿಹಿಡಿದು ಉಪಯೋಗಿಸ್ತಾರೆ. ತಮ್ಮಂಗೆ ಏನೂ ಉಪಕಾರ ಮಾಡೋದಿಲ್ಲ ; ಮತ್ತೆ ನಮ್ಮ ಮೇಗೇನೆ ಜೋರ್ ಮಾಡೋಕ್ಕೆ ಬರ್ತಾರೆ' ಎಂದು ಉತ್ತರ ಕೊಟ್ಟರು.

ಮೆರವಣಿಗೆ ನಿಧಾನವಾಗಿ ಹೊರಟಿತು. ದಾರಿಯುದ್ದಕ್ಕೂ ಆ ಓಲಗ, ಆ ತಮ್ಮಟೆಗಳ ಬಜಾವಣೆ, ಕೊಂಬುಗಳ ಕೂಗು, ಬಹಳ ತಮಾಷೆಯಾಗಿದ್ದುವು. ಈ ತಮಾಷೆಗಳನ್ನೆಲ್ಲ ರಂಗಣ್ಣನ ಹೆಂಡತಿ ಮತ್ತು ಮಕ್ಕಳು ಹಿಂದೆ ನೋಡಿರಲಿಲ್ಲವಾದ್ದರಿಂದ ಅವರಿಗೆ ತಾವೆಲ್ಲೋ ಇಂದ್ರಲೋಕದಲ್ಲಿದ್ದಂತೆ ಕಾಣುತ್ತಿತ್ತು. ಕೊಂಬುಗಳನ್ನು ಕೂಗಿದಾಗಲೆಲ್ಲ ರಂಗಣ್ಣನ ಹುಡುಗರು ಅದನ್ನು ಅನುಕರಣ ಮಾಡುತ್ತ, ನಗುತ್ತ, ತಮ್ಮ ತಾಯಿಗೆ ಆ ವಿಚಿತ್ರ ವಾದ್ಯೋಪಕರಣವನ್ನು ತೋರಿಸುತ್ತ ಹೋಗುತ್ತಿದ್ದರು. ಆ ತಮ್ಮಟೆ ಬಡಿಯುವವರ ಕುಣಿತ ವಿನೋದಕರವಾಗಿತ್ತು. ಮೆರೆವಣಿಗೆ ಹಳ್ಳಿಯೊಳಕ್ಕೆ ಪ್ರವೇಶಿಸಿತು. ಹಳ್ಳಿಯ ಹೆಂಗಸರೆಲ್ಲ ಅಲ್ಲಲ್ಲಿ ಗುಂಪುಗುಂಪುಗಳಾಗಿ ಸೇರಿದ್ದರು. ಕೆಲವರು ತಂತಮ್ಮ ಮನೆಗಳ ಮುಂಭಾಗದಲ್ಲಿ ನಿಂತಿದ್ದರು. 'ಅವರೇ 'ಇನ್‌ಚ್ ಪೆಟ್ರು! ಹೆಂಡ್ತಿನ ಜೊತೆಗೆ ಕರಕೊಂಡ್ ಬಂದವ್ರೇ ! ಚೆನ್ನಾಗವ್ರೇ ಕಾಣಮ್ಮ ! ಮಕ್ಕಳೂ ಮುದ್ದಾಗವ್ರೇ !' ಎಂದು ಆ ಹೆಂಗಸರು ಒಬ್ಬರಿಗೊಬ್ಬರು , ತೋರಿಸುತ್ತ ಮಾತನಾಡಿಕೊಳ್ಳುತ್ತಿದ್ದರು. ಇನ್ಸ್ಪೆಕ್ಟರ ಬಿಡಾರಕ್ಕೆ ಒಂದು ಮನೆಯನ್ನು ಖಾಲಿ ಮಾಡಿಸಿದ್ದರು. ಅಲ್ಲಿಗೆ ಹೋದಮೇಲೆ ಪಂಚಾಯತಿ ಚೇರ್ಮನ್ನು 'ಸ್ವಾಮಿ ! ಗಾಡೀಲಿ ಬಂದು ಸುಸ್ತಾಗಿದ್ದೀರಿ. ರವಷ್ಟು ಆರಾಮಾಗಿ ಇಲ್ಲಿ ಕುಂತಕೊಳ್ಳಿ! ಅಮ್ಮಾವೂ, ಮಕ್ಕಳೂ ದಣಿದವೆ! ಕಾಫಿ ತಿಂಡಿ ತೆಕ್ಕೊಂಡು ಮುಂದಿನ ಕೆಲಸ ಮಾಡೋಣ. ನಾನು ಮತ್ತೆ ಬಂದು ಕರೆಯುತ್ತೇನೆ' ಎಂದು ಹೇಳಿ ಹೊರಟು ಹೋದನು. ಗುಂಪೆಲ್ಲ ಪಂಚಾಯತಿ ಹಾಲಿನ ಬಳಿ ಸೇರಿತು.