ಪುಟ:ರಂಗಣ್ಣನ ಕನಸಿನ ದಿನಗಳು.pdf/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾಗೇನಹಳ್ಳಿಯಲ್ಲಿ ಪ್ರಾರಂಭೋತ್ಸವ

೨೭೩

ಸುಮಾರು ಅರ್ಧ ಗಂಟೆಯ ತರುವಾಯ ಚೇರ್ಮನ್ನು ಮತ್ತು ಮೇಷ್ಟ್ರು ಬಂದರು. ಆ ಹೊತ್ತಿಗೆ ಉಪಾಹಾರವೆಲ್ಲ ಮುಗಿದಿತ್ತು. ರಂಗಣ್ಣ ಸಂಸಾರ ಸಮೇತನಾಗಿ ಪಂಚಾಯತಿ ಪಾಲಿನ ಕಡೆಗೆ ಹೊರಡಲು ಸಿದ್ಧವಾದನು. ಪುನಃ ಓಲಗ, ತಮಟೆ ಮತ್ತು ಕೊಂಬಿನ ಕೂಗುಗಳ ಸಂಭ್ರಮಗಳೊಡನೆ ಮೆರೆವಣಿಗೆಯಾಯಿತು! ಪಂಚಾಯತಿ ಹಾಲಿನ ಮುಂದುಗಡೆ ಚಪ್ಪರವನ್ನು ಹಾಕಿದ್ದರು. ಹಳ್ಳಿಯ ಮಕ್ಕಳೆಲ್ಲ ಚೆನ್ನಾಗಿ ಬಟ್ಟೆಗಳನ್ನು ಹಾಕಿಕೊಂಡು ಶೃಂಗಾರ ಮಾಡಿಕೊಂಡು ಬಂದಿದ್ದರು. ಹಳ್ಳಿಯ ಮುಖಂಡ ರೂ ರೈತರೂ ಹೆಂಗಸರೂ ಕಿಕ್ಕಿರಿದು ಕುಳಿತಿದ್ದರು. ಕೆಲವರು ಕಟ್ಟಡಕ್ಕೆ ದೂರದಲ್ಲೇ ಇದ್ದು ನೋಡುತ್ತಿದ್ದರು. ಆ ದಿನ ಪಂಚಾಯತಿ ಹಾಲನ್ನು ಅಲಂಕಾರ ಮಾಡಿದ್ದರು.

ದೇವತಾ ಪ್ರಾರ್ಥನೆ, ಸ್ವಾಗತ ಪದ್ಯಗಳು, ಸಂಗೀತ- ಇವು ಆದ ಮೇಲೆ ಶ್ಯಾನುಭೋಗನು ಒಂದು ಸಣ್ಣ ಭಾಷಣ ಮಾಡಿದನು. ಚೇರ್ಮನ್ನು ಆಗ ಮಾತನಾಡಲಿಲ್ಲ. ಶ್ಯಾನುಭೋಗನು ತನ್ನ ಭಾಷಣದಲ್ಲಿ ವಿದ್ಯೆಯ ಮಹತ್ವವನ್ನೂ, ಪೂರ್ವ ಕಾಲದಲ್ಲಿ ಭರತಖಂಡದಲ್ಲೆಲ್ಲ ವಿದ್ಯಾ ಪ್ರಚಾರವಿದ್ದುದನ್ನೂ , ಅಲ್ಲಲ್ಲಿ ಗುರುಕುಲಗಳು ಇದ್ದು ಇನ್ನೂ ಪ್ರಸ್ತಾಪ ಮಾಡಿದನು. ಈಗ ಸರಕಾರದವರು ತಮ್ಮ ಹಳ್ಳಿಗೆ ಸರಕಾರಿ ಸ್ಕೂಲನ್ನೇ ಕೊಟ್ಟದ್ದು ತಮಗೆಲ್ಲ ಬಹಳ ಸಂತೋಷವನ್ನುಂಟುಮಾಡಿದೆಯೆಂದೂ ಮುಖ್ಯವಾಗಿ ಇನ್ ಸ್ಪೆಕ್ಟರ್ ಸಾಹೇಬರಿಗೆ ತಾವುಗಳೆಲ್ಲ ಕೃತಜ್ಞರಾಗಿರುವುದಾಗಿಯೂ ಹೇಳಿದನು. ಬಳಿಕ ಪಾಠಶಾಲೆಯ ಪ್ರಾರಂಭೋತ್ಸವವನ್ನು ನೆರವೇರಿಸಬೇಕೆಂದು ಇನ್ ಸ್ಪೆಕ್ಟರ ಕಡೆಗೆ ತಿರುಗಿಕೊಂಡು ಕೈ ಮುಗಿದು ಪ್ರಾರ್ಥಿಸಿದನು.

ಪಂಚಾಯತಿ ಹಾಲೇ ಪಾಠಶಾಲೆಯನ್ನು ಮಾಡತಕ್ಕ ಸ್ಥಳವಾಗಿತ್ತು. ಅಲ್ಲಿ ಆ ಗ್ರಾಮದಲ್ಲಿದ್ದ ಪುರೋಹಿತನೊಬ್ಬನು ಗಣಪತಿ ಮತ್ತು ಸರಸ್ವತೀ ಪಠಗಳಿಗೆ ಪೂಜೆ ಮಾಡಿ, ತೆಂಗಿನ ಕಾಯಿ ಒಡೆದು ನೈವೇದ್ಯ ಮಾಡಿ, ಮಂಗಳಾರತಿಯನ್ನು ಸಾಂಗವಾಗಿ ನೆರವೇರಿಸಿದನು.

ರಂಗಣ್ಣ ದೊಡ್ಡ ಭಾಷಣವನ್ನು ಮಾಡಲಿಲ್ಲ. ಆ ದಿನ ಶುಭ ಮುಹೂರ್ತದಲ್ಲಿ ಪಾಠಶಾಲೆಯ ಪ್ರಾರಂಭವನ್ನು ತಾನು ಮಾಡಿದುದಾಗಿ

18