ಪುಟ:ರಂಗಣ್ಣನ ಕನಸಿನ ದಿನಗಳು.pdf/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭೪

ರಂಗಣ್ಣನ ಕನಸಿನ ದಿನಗಳು

ಹೇಳಿದನು. ಮೇಷ್ಟರನ್ನು ಸ್ವಲ್ಪ ಪ್ರಶಂಸೆ ಮಾಡಿ ಅವರು ದಕ್ಷರೆಂದೂ ಶ್ರದ್ಧೆಯಿಂದ ಕೆಲಸ ಮಾಡುವವರೆಂದೂ, ಅವರ ಯೋಗಕ್ಷೇಮದ ಜವಾಬ್ದಾರಿ ಹಳ್ಳಿ ಯವರಿಗೆ ಸೇರಿದ್ದೆಂದೂ ತಿಳಿಸಿದನು. ಪಾಠಶಾಲೆಯಲ್ಲಿ ತಿಂಗಳಿಗೊಂದಾವೃತ್ತಿ ಕಮಿಟಿ ಮೆಂಬರುಗಳು ಸಭೆ ಸೇರಿ ಮಕ್ಕಳ ವಿದ್ಯಾಭಿವೃದ್ಧಿಯನ್ನು ಪರಿಶೀಲಿಸಿ ಅವರಿಂದ ಆಟಪಾಟಗಳನ್ನು ಆಡಿಸಿ ಏನಾದರೂ ಬಹುಮಾನಗಳನ್ನೂ ತಿಂಡಿಗಳನ್ನೂ ಹಂಚಬೇಕೆಂದು ಹೇಳಿದನು. ಗ್ರಾಮಸ್ಥರು ತನ್ನ ಕೋರಿಕೆಯಂತೆ ಸ್ಲೇಟು ಪುಸ್ತಕಗಳನ್ನು ಉಚಿತವಾಗಿ ಕೊಟ್ಟಿರುವುದರಿಂದ ಅವರಿಗೆ ತಾನು ಕೃತಜ್ಞನಾಗಿರುವುದಾಗಿ ತಿಳಿಸಿದನು. ಮುಖ್ಯವಾಗಿ ಗ್ರಾಮಗಳು ಏಳಿಗೆಗೆ ಬರಬೇಕಾದರೆ ಪಾರ್ಟಿಗೀರ್ಟಿಗಳಿಲ್ಲದೆ ಐಕಮತ್ಯದಿಂದ ಕೆಲಸ ಮಾಡಬೇಕೆಂದೂ ನಾಗೇನ ಹಳ್ಳಿಯಲ್ಲಿ ಪಾರ್ಟಿಗಳಿಲ್ಲವೆಂಬುದನ್ನು ನೋಡಿ ತನಗೆ ಬಹಳ ಸಂತೋಷವಾಗಿರುವುದೆಂದೂ ಹೇಳಿದನು. ಕಡೆಯಲ್ಲಿ ತನಗೆ ತೋರಿಸಿದ ಆದರಾತಿಥ್ಯಗಳಿಗಾಗಿ ಕೃತಜ್ಞತೆಯನ್ನು ಸೂಚಿಸಿ ಆ ಪಾಠಶಾಲೆ ಉತ್ತರೋತ್ತರ ಅಭಿವೃದ್ಧಿಯನ್ನು ಪಡೆಯಲೆಂದೂ ಅಲ್ಲಿ ಒಂದು ಮಿಡಲ್ ಸ್ಕೂಲ್ ಸ್ಥಾಪಿತವಾಗಲೆಂದೂ ಹಾರೈಸಿದನು.

ಜನರಿಗೆಲ್ಲ ಬಹಳ ಸಂತೋಷವಾಯಿತು. ಚೇರ್ಮನ್ನು ವಂದ ನಾರ್ಪಣೆಯ ಭಾಷಣವನ್ನು ಮಾಡಿದನು : 'ಸ್ವಾಮಿ ! ನಾವು ಹಳ್ಳಿಯ ಜನ; ತಿಳಿವಳಿಕೆ ಕಡಮೆ. ಈಗ ಇಸ್ಕೂಲ್ ದಯಪಾಲಿಸಿದ್ದೀರಿ. ಮುಂದೆ ನಮ್ಮ ಮಕ್ಕಳು ವಿದ್ಯೆ ಚೆನ್ನಾಗಿ ಕಲಿತು ನಮಗಿ೦ತ ತಿಳಿವಳಿಕಸ್ತರಾಗಿ ಬಾಳುವುದಕ್ಕೆ ಅನುಕೂಲ ಕಲ್ಪಿಸಿದ್ದಿರಿ. ನಾವು - ನಮಗೆ ಇಸ್ಕೂಲ್ಬೇಕು, ಎಂದು ಕೇಳೊದಕ್ಕೆ ಕೂಡ ಗೊತ್ತಿಲ್ಲದೆ ಅಜ್ಞಾನದಲ್ಲಿದ್ದಾಗ, ತಾವೇ ನಮಗೆ ಹೇಳಿಕಳಿಸಿ ಅರ್ಜಿ ಈ ಸಿಕೊಂಡು ಇಸ್ಕೂಲ್ ಮುಂಜೂರ್ ಮಾಡಿದ ಉಪಕಾರಾನ ನಾವೆಂದಿಗೂ ಮರೆಯೋದಿಲ್ಲ! ತಮ್ಮ ಕಾಲದಾಗೆ ಮೇಷ್ಟ್ರುಗಳಿಗೆಲ್ಲ ತಿಳಿವಳಿಕೆಯನ್ನು ಕೊಟ್ಟರಿ, ಗ್ರಾಮಸ್ಥರಿಗೆಲ್ಲ ತಿಳಿವಳಿಕೆಯನ್ನು ಕೊಟ್ಟರಿ; ವಿದ್ಯೆ ಚೆನ್ನಾಗಿ ಹರಡುವಂತೆ ಸಂಘಗಳನ್ನು ಎಲ್ಲ ಕಡೆಯ ನಡೆಸಿದಿರಿ, ತಮ್ಮ ಹೆಸರು ಶಾಸನ ಆಗೋಯ್ತು!'