ಪುಟ:ರಂಗಣ್ಣನ ಕನಸಿನ ದಿನಗಳು.pdf/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾಗೇನಹಳ್ಳಿಯಲ್ಲಿ ಪ್ರಾರಂಭೋತ್ಸವ

೨೭೫

'ಈಗ ತಾವು ನನಗೆ ಹೇಳಿದ ಬುದ್ಧಿವಾದದಂತೆ ನಡೆದುಕೊಳ್ಳಲು ಪ್ರಯತ್ನಪಡುತ್ತೇವೆ. ಮೇಷ್ಟರು ಬಡವರು, ಅವರನ್ನು ಆದರಿಸಬೇಕು ಎಂದು ನಮಗೆ ತಮ್ಮ ಕಚೇರಿಯಲ್ಲಿ ತಿಳಿಸಿದಿರಿ. ಇಗೋ ಸ್ವಾಮಿ! ಮನೆಗೆ ಐದು ಸೇರು ರಾಗಿಯಂತೆ ಶೇಖರಣ ಮಾಡಿ ಈ ಮೂರು ಮೂಟೆಗಳನ್ನು ಇಟ್ಟಿದ್ದೇವೆ. ತಾವೇ ಅದನ್ನು ನಮ್ಮ ಪರವಾಗಿ ಮೇಷ್ಟರಿಗೆ ದಾನ ಮಾಡಬೇಕೆಂದು ಪ್ರಾರ್ಥಿಸುತ್ತೇವೆ ! ವರ್ಷವಷವೂ ಹೀಗೇನೇ ಮೇಷ್ಟರಿಗೆ ಸಹಾಯ ನಡೆಸಿಕೊಂಡು ಹೋಗಬೇಕು ಎಂದು ಸಂಕಲ್ಪ ಮಾಡಿದ್ದೇವೆ. ಇಸ್ಕೂಲಿಗೆ ಸ್ಲೇಟು ಪುಸ್ತಕ ವಗೈರೆ ದಾನ ಮಾಡಬೇಕು ಎಂದು ಅಪ್ಪಣೆ ಕೊಡಿಸಿದ್ದಿರಿ. ಎಲ್ಲವನ್ನೂ ಮೇಜಿನಮೇಲೆ ಇಟ್ಟಿದ್ದೇವೆ; ಪರಾಂಬರಿಸಬೇಕು. ಈ ದಿನ ತಾವು ಕುಟುಂಬ ಸಮೇತ ನಮ್ಮ ಹಳ್ಳಿಗೆ ಬಂದು ಬಡರೈತರ ಆತಿಥ್ಯ ಸ್ವೀಕಾರ ಮಾಡಿದ್ದಕ್ಕಾಗಿ ಈ ಗ್ರಾಮದ ಪರವಾಗಿ ತಮಗೆ ಕೃತಜ್ಞತೆ ಸೂಚಿಸುತ್ತೇನೆ. ತಮಗೆ ದೇವರು ಒಳ್ಳೆದು ಮಾಡಲಿ ಸ್ವಾಮಿ !'

ತರುವಾಯ ಜಯಕಾರಗಳಾದುವು. ರಂಗಣ್ಣ ರಾಗಿಯ ಮೂಟೆಗಳನ್ನು ನೋಡಿ ಬಹಳ ಸಂತೋಷಪಟ್ಟು, ಅವನ್ನು ಮೇಷ್ಟರಿಗೆ ವಹಿಸಿಕೊಟ್ಟನು. ಮೇಷ್ಟು ಆನಂದಿತನಾಗಿ, 'ಸ್ವಾಮಿ ! ಹಿಂದೆ ಯಾರೂ ಇನ್ಸ್ಪೆಕ್ಟರು ಮೇಷ್ಟರುಗಳಿಗೆ ಇಂಥಾ ಉಪಕಾರ ಮಾಡಿ ಸಲಿಲ್ಲ! ಹಳ್ಳಿಯವರೂ ಮಾಡಿರಲಿಲ್ಲ ! ನಾನು ತಮಗೂ ಗ್ರಾಮಸ್ಥರಿಗೂ ಚಿರಋಣಿಯಾಗಿದ್ದೇನೆ. ಈಗ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ನಾನು ನಿರ್ವಂಚನೆಯಿಂದ ಈ ಮಕ್ಕಳಿಗೆ ವಿದ್ಯೆಯನ್ನು ಹೇಳಿಕೊಡುತ್ತೇನೆ. ಗ್ರಾಮಸ್ಥರ ಹಿತವನ್ನೇ ಬಯಸಿ ನಡೆದುಕೊಳ್ಳುತ್ತೇನೆ !' ಎಂದು ಹೇಳಿದನು. ಮಕ್ಕಳಿಗೂ ಇತರರಿಗೂ ಬುರುಗಲು ಬತ್ತಾಸುಗಳ ವಿತರಣೆಯಾಯಿತು. ದೊಡ್ಡವರಿಗೆ ಹೂವು ಗಂಧಗಳ ಸಮರ್ಪಣೆಯಾಯಿತು. 'ಕಾಯೌ ಶ್ರೀಗೌರಿ'ಯೊಡನೆ ಸಭೆ ಮುಕ್ತಾಯವಾಯಿತು.

ರಂಗಣ್ಣನ ಬಿಡಾರದಲ್ಲಿ ಚೇರ್ಮನ್ನು, 'ಸ್ವಾಮಿ ! ಪಾರ್ಟಿಗೀರ್ಟಿ ಇಲ್ಲದೆ ಐಕಮತ್ಯದಿಂದ ಇರ್ರಿ ಎಂದು ತಾವೇನೊ ಈ ದಿನ ನಮಗೆಲ್ಲ ಬುದ್ಧಿವಾದ ಹೇಳಿದ್ರಿ. ನಾವು ಹಳ್ಳಿ ಜನ; ವಿದ್ಯೆ ಇಲ್ಲದ ಒಕ್ಕಲ