ಪುಟ:ರಂಗಣ್ಣನ ಕನಸಿನ ದಿನಗಳು.pdf/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭೬

ರಂಗಣ್ಣನ ಕನಸಿನ ದಿನಗಳು

ಮಕ್ಕಳು. ಬೆಂಗಳೂರು ಮೈಸೂರು ದೊಡ್ಡ ದೊಡ್ಡ ಪಟ್ಟಣದಾಗೆಲ್ಲ ಓದಿದವರು ಪಾರ್ಟಿ ಕಟ್ಟಿಕೊಂಡು ವಾಜ್ಯ ಆಡ್ತಾರಲ್ಲ! ಒಬ್ಬರನ್ನೊಬ್ಬರು ಬೈದಾಡ್ತಾರಲ್ಲ? ಅದೇನೂ ಕಾಂಗ್ರೆಸ್ ಪಾರ್ಟಿ ಅಂತೆ, ಸೊತಂತ್ರ ಪಾರ್ಟಿ ಅಂತೆ, ಇನ್ನೂ ಏನೇನೋ ಹೇಳ್ತಾರೆ ಸ್ವಾಮಿ! ಚುನಾವಣೆಗಳ ಕಾಲ ಬಂತೋ ಅವರ ಕಾಟ ಹೇಳೋ ಹಾಗಿಲ್ಲ! ಗಾಂಧಿ ಪಟ ತರೋವರು! ಮಹಾರಾಜರ ಪಟ ತರೋವರು! ಬೀದೀಲೆ ಮಾರಾಮಾರಿ! ಹಳ್ಳಿ ಜನಕ್ಕೆಲ್ಲ ಏನೇನೋ ಬೋಧನೆ ಮಾಡಿ ಹಳ್ಳಿಗೆಲ್ಲ ಪಾರ್ಟಿ ತಂದು ಬಿಟ್ಟಿದ್ದಾರಲ್ಲ! ನೋಡಿ ಸ್ವಾಮಿ ನಮ್ಮ ಹಳ್ಳಿಲಿ ಈಚೆಗೆ ನಾಲ್ಕು ಜನ ಖಾದಿ ಬಟ್ಟೆ ಹಾಕ್ಕೊಂಡು ಗಾಂಧಿ ಪಟ ಇಟ್ಗೊಂಡು ಮೆರವಣಿಗೆ ಆಗಾಗ್ಗೆ ಹೊರಡ್ತಾರೆ! ಅವರಿಗೆ ಪ್ರತಿಕಕ್ಷಿಯಾಗಿ ಮತ್ತೆ ಯಾರೋ ನಾಲ್ಕು ಜನ ಮಹಾರಾಜರ ಪಟ ಎತ್ತಿಕೊಂಡು ಮೆರವಣಿಗೆ ಹೊರಡ್ತಾರೆ! ರೆಪ್ರಜೆಂಟಿ ಸಭೆ ನೋಡಿ! ಅಲ್ಲಿ ಪಾರ್ಟಿ ಪಾರ್ಟಿ ವ್ಯಾಜ್ಯ ! ಡಿಸ್ಟಿಕ್ಸ್ ಬೋರ್ಡ್ ನೋಡಿ, ಅಲ್ಲೇನೂ ಪಾರ್ಟಿ ! ಜನಾರ್ದನಪುರದ ಮುನಿಸಿಪಾಲಿಟಿ ನೋಡಿ, ಅಲ್ಲಿನ ವ್ಯಾಜ್ಯ ! ಈಗ ನಮ್ಮ ಪಂಚಾಯತಿಗೂ ಈ ಪಾರ್ಟಿ ವ್ಯಾಜ್ಯ ಬಂದುಬಿಟ್ಟಿದೆ! ಖಾದಿ ಬಟ್ಟೆ ಹಾಕಿದವರಿಗೇನೆ ಓಟು ಕೊಡಿ ಅಂತ ಹೊರಟಿದ್ದಾರೆ! ಹಳ್ಳಿ ಜನ ನಾವು. ನಾವು ಪಾರ್ಟಿ ಮಾಡಿ ವ್ಯಾಜ್ಯ ಆಡ್ತೇವೆ ಅಂತ ಸುಮ್ಮಸುಮ್ಮನೆ ನಮ್ಮನ್ನು ದೂರ್ತಾರಲ್ಲ! ಏನು ಮಾಡೋಣ ಹೇಳಿ ಸ್ವಾಮಿ!' ಎಂದು ಕೇಳಿದನು.

ರಂಗಣ್ಣ, 'ಅದೆಲ್ಲ ರಾಜಕೀಯ ವಿಚಾರ. ನಾನು ಸರಕಾರದ ನೌಕರ. ಅದನ್ನೆಲ್ಲ ಚರ್ಚಿಸಬಾರದು. ನಿಮ್ಮ ನಿಮ್ಮಲ್ಲಿ ವಾಜ್ಯ ಆಡಿಕೊಂಡು ಕೋರ್ಟು ಕಚೇರಿಗಳನ್ನು ಹತ್ತಬೇಡಿ; ಪರಸ್ಪರ ಛಲ ವೈರ ಇಟ್ಟು ಕೊಂಡು ಕೆಟ್ಟು ಹೋಗಬೇಡಿ. ಅಷ್ಟೇ ನಾನು ಹೇಳುವುದು? ಎಂದನು.

ಮಧ್ಯಾಹ್ನ ಭರ್ಜರಿ ಭೋಜನವಾದಮೇಲೆ ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಂಡು ರಂಗಣ್ಣ ಸಂ ಸಾರದೊಂದಿಗೆ ಸಾಯಂಕಾಲ ಜನಾರ್ದನಪುರಕ್ಕೆ ಹಿಂದಿರುಗಿದನು. ಚೇರ್ಮನ್ನು ಒಳ್ಳೆಯ ಕಮಾನು ಕಟ್ಟಿದ ಬೇರೆ ಗಾಡಿಯನ್ನೂ ಜೊತೆಗೆ ಆಳುಗಳನ್ನೂ ಕಳಿಸಿದನು.