ಪುಟ:ರಂಗಣ್ಣನ ಕನಸಿನ ದಿನಗಳು.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪

ರಂಗಣ್ಣನ ಕನಸಿನ ದಿನಗಳು

ಗಳು, ಕಾಶ್ಮೀರ ಶಾಲು, ಟವಲ್ಲುಗಳು ಮೊದಲಾದುವನ್ನೆಲ್ಲ ಒದಗಿಸಿಕೊಂಡದ್ದಾಯಿತು. ಹಳೆಯ ಬೈಸ್ಕಲ್ಲನ್ನು ಮಾರಿಬಿಟ್ಟು ಹೊಸ ಬಿ. ಎಸ್. ಎ. ಬೈಸ್ಕಲ್ಲನ್ನು ತಂದದ್ದಾಯಿತು ಸರ್ಕಿಟಿನಲ್ಲಿ ಅಡಿಗೆಗೆ ಬೇಕಾದ ಸಾಮಾನುಗಳನ್ನು ಇಟ್ಟು ಕೊಳ್ಳುವುದಕ್ಕೆ ಅಡಕವಾದ ಸಣ್ಣ ಡಬ್ಬಗಳು, ಆ ಡಬ್ಬಗಳನ್ನಿಡುವುದಕ್ಕೆ ಒಂದು ಟ್ರಂಕು - ಇವುಗಳ ಏರ್ಪಾಡಾಯಿತು. ತನ್ನ ಬಟ್ಟೆಗಳನ್ನು ಇಟ್ಟು ಕೊಳ್ಳುವುದಕ್ಕೆ ಎರಡು ಸೂಟ್ ಕೇಸುಗಳು, ಮುಖ ಕ್ಷೌರಕ್ಕೆ ಬೇಕಾದ ಕನ್ನಡಿ ಮೊದಲಾದ ಉಪಕರಣಗಳು, ಹಲ್ಲನ್ನುಜ್ಜಿ ಕೊಳ್ಳುವ ಬ್ರಷ್, ಪೇಸ್ಟ್- ಎಲ್ಲವನ್ನೂ ತಂದುಕೊಂಡದ್ದಾಯಿತು. ರಂಗಣ್ಣನಿಗೆ ತಾನೊಬ್ಬ ದೊಡ್ಡ ಸಾಹೇಬನೆಂದೂ ತನ್ನ ದರ್ಬಾರು ಡೆಪ್ಯುಟಿ ಕಮಿಷನರ್ ಸಾಹೇಬರ ದರ್ಬಾರನ್ನು ಮೀರಿಸುವಂತಿರಬೇಕೆಂದೂ ಭಾವನೆಗಳಿದ್ದು ವು. ಕೆಲವು ಕಡೆಗಳಲ್ಲಿ ಅಸಿಸ್ಟೆಂಟ್ ಇನ್ ಸ್ಪೆಕ್ಟರುಗಳೆಂದರೆ ಅರಳಿಟ್ಟಿನ ಇನ್ಸ್ಪೆಕ್ಟರೆಂದೋ ಅವಲಕ್ಕಿ ಇನ್ ಸ್ಪೆಕ್ಟರೆಂದೋ ಹಾಸ್ಯಕ್ಕೀಡಾಗಿದ್ದು ದನ್ನು ಅವನು ತಿಳಿದಿದ್ದುದರಿ೦ದ ಆ ಮಟ್ಟಕ್ಕಿಳಿಯದೆ ಎಲ್ಲರಿಗೂ ಮೇಲ್ಪಂಕ್ತಿಯಾಗಿರಬೇಕೆಂಬ ಮಹತ್ವಾಕಾಂಕ್ಷೆ ಅವನಲ್ಲಿ ತುಂಬಿದ್ದಿತು. ಒಟ್ಟಿನಲ್ಲಿ ಸರೀಕರಲ್ಲಿ ತನ್ನ ಗೌರವವನ್ನು ಉಳಿಸಿಕೊಂಡು ಇಲಾಖೆಯ ಗೌರವವನ್ನೂ ಹೆಚ್ಚಿಸಬೇಕೆಂಬುದು ಅವನ ಇಚ್ಛೆ.

ಈ ರೀತಿ ಸಜ್ಜುಗಳಾಗುತ್ತಿದ್ದಾಗ ರಂಗಣ್ಣನ ಹೆಂಡತಿ ತನಗೆ ಸರಿಗೆಯಿರುವ ಎರಡು ಒಳ್ಳೆಯ ಧರ್ಮಾವರದ ಸೀರೆಗಳೂ ಕುಪ್ಪಸಗಳೂ ಬೇಕೆಂದು ಕೇಳಿದಳು, ಆ ಬೇಡಿಕೆ ನ್ಯಾಯವೆಂದು ರಂಗಣ್ಣನಿಗೆ ತೋರಿತು. ಪೇಟೆಗೆ ಹೋಗಿ ಆಕೆಗೆ ಬೇಕಾದ ಸೀರೆ ಕುಪ್ಪಸಗಳನ್ನು ತಂದದ್ದಾಯಿತು. ಇಷ್ಟಕ್ಕೆ ಸಜ್ಜು ಮುಗಿಯಬಹುದೆಂದು ರಂಗಣ್ಣನು ತಿಳಿದುಕೊಂಡಿದ್ದನು. ಆದರೆ ಅದು ಮುಗಿಯಲಿಲ್ಲ. “ನೋಡಿ, ಹುಡುಗರಿಗೆ ತಕ್ಕ ಬಟ್ಟೆ ಬರೆ ಇಲ್ಲ. ಪರದೇಶಿ ಮಕ್ಕಳಂತೆ ಅವರು ಓಡಾಡುವುದಕ್ಕಾಗುತ್ತದೆಯೇ ? ಸ್ಕೂಲಿನಲ್ಲಿ ಅಮಲ್ದಾರರ ಮಕ್ಕಳು ಒಳ್ಳೆಯ ಬಟ್ಟೆಗಳನ್ನು ಹಾಕಿಕೊಂಡು ಕುಳಿತಿದ್ದರೆ ನಿಮ್ಮ ಮಕ್ಕಳು ಈ ಹಳೆಯ ಚಿಂದಿಗಳನ್ನು ತೊಟ್ಟುಕೊಂಡು ಕುಳಿತಿರುವುದೆ ? ಖಂಡಿತ ಆಗುವುದಿಲ್ಲ.