ಪುಟ:ರಂಗಣ್ಣನ ಕನಸಿನ ದಿನಗಳು.pdf/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮೦

ರಂಗಣ್ಣನ ಕನಸಿನ ದಿನಗಳು

ಉಗ್ರಪ್ಪನಾಗುವುದಿಲ್ಲ, ತಲೆಯೆತ್ತಿಕೊಂಡು ಪಾಳೆಯಗಾರನಾಗಿ ಮೆರೆಯುತ್ತಿದ್ದವನು ಅಪಮಾನವನ್ನು ಅನುಭವಿಸಿಬಿಟ್ಟಿ ! ಈ ಜನಾರ್ದನಪುರದಲ್ಲಿ ಮುಖ ತೋರಿಸದಂತೆ ಭಂಗಪಟ್ಟಿ ! ನಾನು ಮತ್ತೆ ಕೆಲಸಕ್ಕೆ ಸೇರಿ ಉಪಾಧ್ಯಾಯರ ಸಂಘದ ಸಭೆಗಳಲ್ಲಿ ಹೇಗೆ ಮುಖವೆತ್ತಿಕೊಂಡು ಕುಳಿತುಕೊಳ್ಳಲಿ ! ಅಪ್ಪಣೆಯಾಗಲಿ ಸ್ವಾಮಿ ! '

'ನಾನೇನು ಮಾಡಲಿ ಮೇಷ್ಟೆ ! ನನಗೂ ಬಹಳ ವ್ಯಸನವಾಗುತ್ತಿದೆ, ನೀವು ಹಾಗೆಲ್ಲ ಅವಿಧೇಯತೆಯಿಂದ ನಡೆದುಕೊಳ್ಳದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಸರಕಾರದ ನೌಕರಿಯಲ್ಲಿದ್ದ ಮೇಲೆ ನಾವೆಲ್ಲ ಶಿಸ್ತಿಗೊಳಪಟ್ಟಿರಬೇಕು ; ತಗ್ಗಿ ನಡೆಯಬೇಕು. '

'ಅದೇ ಸ್ವಾಮಿ ನನಗೂ ತಮಗೂ ವ್ಯತ್ಯಾಸ! ತಾವು ನನಗೆ ಅನ್ಯಾಯ ಮಾಡಿದ್ದೀರೆಂದು ನಾನು ಕಾರಣವಿಲ್ಲದೆ ಹೇಳಲಿಲ್ಲ. ಸರಕಾರದ ಮಾತು ಆಡುತ್ತೀರಿ; ನೌಕರಿಯ ಮಾತು ಆಡುತ್ತೀರಿ ; ತಗ್ಗಿ ನಡೆಯಬೇಕು ಎಂದು ಹೇಳುತ್ತೀರಿ. ತಮ್ಮನ್ನು ಕೇಳುತ್ತೇನೆ. ಹೇಳಿ ಸ್ವಾಮಿ ! ತಾವು ಓದಿದವರು, ನಮ್ಮ ಇಲಾಖೆಯಲ್ಲಿ ತಮ್ಮಷ್ಟು ಬುದ್ಧಿವಂತರು ನಾಲೈದು ಜನಇರುವರೋ ಇಲ್ಲವೋ ಹೇಳಲಾರೆ. ನಿಧಾನವಾಗಿ ಆಲೋಚನೆ ಮಾಡಿ ಸ್ವಾಮಿ ! ಸರಕಾರ ಎಂದರೆ, ಅದನ್ನು ನಡೆಸುವ ನಾಲ್ಕು ಜನ ಮನುಷ್ಯರು ತಾನೇ ! ಸರಕಾರಕ್ಕೆ ರೂಪ ಇದೆಯೇ ? ಗುಣ ಇದೆಯೇ ? ಎಲ್ಲ ಆ ನಾಲ್ವರ ಕಾರುಬಾರು ! ಸರಕಾರದ ಗೌರವ ಎಂದರೆ ಆ ನಾಲ್ವರ ಗೌರವ ! ಅವರೇ ಮಾಡುವ ಹುಕುಮುಗಳು ಜಾರಿಗೆ ಬರದಿದ್ದರೆ ಅವರ ಗೌರವ ಉಳಿಯುತ್ತದೆಯೇ ? ಸರಕಾರದ ಗೌರವಕ್ಕೆ ಕುಂದುಕವಲ್ಲವೇ ? ಜಾರಿಗೆ ಬಾರದ ಹುಕುಮುಗಳನ್ನು ಏತಕ್ಕೆ ಮಾಡ ಬೇಕು ? ಹೇಳಿ ಸ್ವಾಮಿ !- ಇಲ್ಲಿ ಹೇಸಿಗೆ ಮಾಡಬಾರದು ! ಹೇಸಿಗೆ ಮಾಡಿದವರು ದಂಡನೆಗೊಳಗಾಗುತ್ತಾರೆ !-ಎಂದು ಬೋರ್ಡುಗಳನ್ನು ಊರಿನಲ್ಲೆಲ್ಲ ನೆಡುತ್ತಾರೆ. ಬೋರ್ಡಿನ ಕಂಬದ ಸುತ್ತಲೂ ಹೇಸಿಗೆಯನ್ನು ಎಲ್ಲರೂ ಮಾಡುತ್ತಾರೆ ! ಆ ಕಂಬಕ್ಕನೆ ಮೂತ್ರಾಭಿಷೇಕ ಮಾಡುತ್ತಾರೆ! ಸರಕಾರಿ ನೌಕರರು, ಕಡೆಗೆ ತಪ್ಪಿತಸ್ಥರನ್ನು ಹಿಡಿಯಬೇಕಾದ ಪೊಲೀಸಿನವರೇ ಮೂತ್ರಾಭಿಷೇಕ ಮಾಡುವುದನ್ನು ನಾನು ನೋಡಿದ್ದೇನೆ. ಅಪಮಾನವನ್ನು ತಪ್ಪಿಸಲು