ಪುಟ:ರಂಗಣ್ಣನ ಕನಸಿನ ದಿನಗಳು.pdf/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉಗ್ರಪ್ಪನ ವಾದ

೨೮೧

ಪ್ರತಿಭಟಿಸಿದರೆ ನಾನು ಅಪರಾಧಿಯೇ? ನನಗೆ ದಂಡನೆ ಮಾಡಬಹುದೇ ? ಸರಕಾರಕ್ಕೆ ನಿತ್ಯ ಅಪಮಾನವಾಗುತ್ತಿರುವುದನ್ನು ನಾನು ತಪ್ಪಿಸಿದರೆ ನನಗೆ ಸಸ್ಪೆಂಡ್ ಮಾಡಬಹುದೇ ? ಬಸ್ಸುಗಳಲ್ಲಿ ನೋಡಿ ಸ್ವಾಮಿ ! ಬೀಡಿ ಸಿಗರೇಟುಗಳನ್ನು ಖಂಡಿತ ಸೇದಬಾರದು- ಎಂದು ಬೋರ್ಡು ! ಒಂದು ಕೈಯಲ್ಲಿ ಚಕ್ರ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಸಿಗರೇಟ್ ಹಚ್ಚಿಕೊಳ್ಳುತ್ತ, ರಾಜಾರೋಷಾಗಿ ಹೊಗೆಯನ್ನೆಲ್ಲ ಆ ಬೋರ್ಡಿಗೇ ಬಿಡುವ ಡ್ರೈವರನ್ನು ನೋಡಿಲ್ಲವೇ ನೀವು ? ಮುಂದುಗಡೆ ಸೀಟುಗಳಲ್ಲಿ ಕುಳಿತುಕೊಳ್ಳುವ ಸರಕಾರದ ಅಧಿಕಾರಿಗಳೇ ಆ ಬೋರ್ಡಿಗೆ ಧೂಪಾರತಿ ಎತ್ತುವುದನ್ನು ನೋಡಿಲ್ಲವೇ ನೀವು ? ಬಸ್ಸಿನ ಒಳಗಡೆಯಲ್ಲಿ ಸಿಗರೇಟುಗಳನ್ನು ಹಚ್ಚಿ ಕೊಂಡು ಎದುರಿಗೆ ಕುಳಿತಿರುವ ಸಭ್ಯರ ಮತ್ತು ಸ್ತ್ರೀಯರ ಮುಖಗಳಿಗೇನೆ ಹೊಗೆ ಬಿಡುವ ಮನುಷ್ಯರನ್ನು ನೋಡಿಲ್ಲವೇ ನೀವು ? ಏಕೆ ಸ್ವಾಮಿ ನಿಮಗೆ ಆ ಬೋರ್ಡು ? ಸರಕಾರ ತನ್ನ ಆಜ್ಞಾಭಂಗವನ್ನು ಸಹಿಸುತ್ತಿದ್ದರೆ ಅದು ಸರಕಾರವೇ ? ರೈಲುಗಳಲ್ಲಿ ನೋಡಿ ! ಇಪ್ಪತ್ತು ಜನ ಕುಳಿತು ಕೊಳ್ಳುವ ಗಾಡಿಯಲ್ಲಿ ಅರುವತ್ತು ಜನ ! ಒಳಗೆ ಬೋರ್ಡು ನೋಡಿದರೆ- ಇಪ್ಪತ್ತು ಜನ ಕುಳಿತುಕೊಳ್ಳುವುದು - ಎಂದು ಲಿಖಿತ! ಆ ಬೋರ್ಡು ಹಾಕಿ ಅಪಮಾನ ಪಟ್ಟು ಕೊಳ್ಳಬೇಡಿ. ಎಂತಿದ್ದರೂ ನಮ್ಮ ಜನ ಕುರಿಗಳು ! ಸರಕಾರಕ್ಕೆ ತನ್ನ ಮಾತು ನಡೆಯಬೇಕೆಂಬ ಸ್ವಾಭಿಮಾನವಿಲ್ಲ. ದೊಡ್ಡ ದೊಡ್ಡ ಅಧಿಕಾರಿಗಳಲ್ಲೇ ಲಂಚರುಷುವತ್ತುಗಳು ! ಎಲ್ಲ ಕಡೆಯೂ ಸರಕಾರದ ಆಪ್ಟೆಲ್ಲಂಘನೆಗಳು ! ಗತಿಯಿಲ್ಲದ ನಾಲ್ಕು ಜನರನ್ನು ದಂಡಿಸಿ ಶಿಸ್ತು ಕಾಪಾಡುವುದು ಎಂದರೇನು ? ?

'ನನ್ನ ಮೇಲೆ ದೋಷಾರೋಪಣೆಗಳನ್ನು ಹೊರಿಸಿ ಸಸ್ಪೆಂಡ್ ಮಾಡಿದಿರಿ! ಅದು ಅನ್ಯಾಯವೆಂದೇ ಹೇಳುತ್ತೇನೆ. ನಮ್ಮ ಇಲಾಖೆಯ ರೂಲ್ಸು ರೆಗ್ಯುಲೇಷನ್ನು ಗಳನ್ನು ತಾವು ನೋಡಿದ್ದೀರಿ, ಪ್ರೈಮರಿ ತರಗತಿ ಗಳಲ್ಲಿ ಇಪ್ಪತೈದು-ಮುವ್ವತ್ತು ಮಕ್ಕಳು ; ಮಿಡಲ್ ಸ್ಕೂಲಿನ ತರಗತಿಗಳಲ್ಲಿ ನಲವತ್ತು ಮಕ್ಕಳು, ಎಂದು ನಿಗದಿ ಮಾಡಿದ್ದಾರೆ. ಏತಕ್ಕೋಸ್ಕರ ನಿಗದಿಮಾಡಿದ್ದಾರೆ ಸ್ವಾಮಿ ? ಸಾವಧಾನವಾಗಿ ಆಲೋಚನೆ ಮಾಡಿ, ತಾವು ವಿದಾಭ್ಯಾಸ ಪದ್ಧತಿಗಳನ್ನು ಚೆನ್ನಾಗಿ ಓದಿಕೊಂಡಿದ್ದೀರಿ ;