ಪುಟ:ರಂಗಣ್ಣನ ಕನಸಿನ ದಿನಗಳು.pdf/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮೪

ರಂಗಣ್ಣನ ಕನಸಿನ ದಿನಗಳು

ಗುಲಾಮರಂತೆ ಕಂಡರೆ ನಾವು ಪ್ರತಿಭಟಿಸಬೇಕು, ಅವರಿಗೆ ಬುದ್ಧಿ ಕಲಿಸಬೇಕು. ನಾನು ಹಿಂದೆ ಡೆಪ್ಯುಟಿ ಕಮಿಷನರ್ ಸಾಹೇಬರಿಗೆ ಹಾಗೆ ಬುದ್ಧಿ ಕಲಿಸಿದೆ ಸ್ವಾಮಿ ! ತಮಗೆಲ್ಲ ತಿಳಿದಿರಬೇಕು. ತಾವೇ ನ್ಯಾಯ ನೋಡಿ! ಸರಕಾರ ಬಡ ಮೇಷ್ಟರುಗಳಿಗೆ ಕೊಡುವುದು ಅಲ್ಪ ಸಂಬಳ. ಹೊಟ್ಟೆಗೆ ಸಾಲದು, ಬಟ್ಟೆಗೆ ಸಾಲದು ;-ನಮಗೆ ಹೊಟ್ಟೆಗೆ ಸಾಕಾದಷ್ಟು ಕೊಡಿ, ಇಲ್ಲದಿದ್ದರೆ ನಾವು ಕೆಲಸ ಮಾಡುವುದಿಲ್ಲ ಎಂದು ಹೇಳಿದರೆ, ಸರಕಾರವನ್ನು ಪ್ರತಿಭಟಿಸಕೂಡದು ಎನ್ನುತ್ತೀರಿ! ಅರೆಗಂಜಿ ಕಾಲಗಂಜಿಗಳಲ್ಲೇ ತೃಪ್ತಿ ಪಟ್ಟು ಕೊಳ್ಳಬೇಕು ಎನ್ನುತ್ತೀರಿ ! ಕೆಲಸ ತೆಗೆಯುವುದನ್ನು ನೋಡಿದರೆ, ಇಪ್ಪತ್ತೈದು ಮಕ್ಕಳಿಗೆ ಪಾಠ ಹೇಳಿಕೊಡುವುದಕ್ಕೆ ಬದಲಾಗಿ ನಲವತ್ತೈದು ಮಕ್ಕಳಿಗೆ ಪಾಠ ಹೇಳು ಎನ್ನುತ್ತೀರಿ! ನಾನು ಹೇಳುವುದಿಲ್ಲ ಎಂದು ಪ್ರತಿಭಟಿಸಿದರೆ,-ನಿನಗೆ ಸ್ವಾತಂತ್ರ್ಯವಿಲ್ಲ ! ನೀನು ಗುಲಾಮ ಎನ್ನುತ್ತೀರಿ! ಅಧಿಕಾರವಿದೆ ಎಂದು ಸಸ್ಪೆಂಡ್ ಮಾಡುತ್ತೀರಿ !'

'ಹೌದು ಮೇಷ್ಟೆ ! ನಿಮ್ಮ ಅಸಮಾಧಾನಗಳನ್ನೂ ಅಹವಾಲುಗಳನ್ನೂ ವಿನಯದಿಂದ ಹೇಳಿಕೊಳ್ಳಬೇಕು. ಒರಟಾಟ ಮಾಡಬಾರದು.'

'ಸ್ವಾಮಿ ! ನಾನೇನು ಒರಟಾಟ ಮಾಡಿದ್ದೇನೆ ? ಹೆಚ್ಚು ಮಕ್ಕಳಿಗೆ ಪಾಠ ಮಾಡುವುದಿಲ್ಲ ಎಂದು ಹೇಳಿದ್ದುಂಟು ; ಪಾಠ ಮಾಡದೆ ನಿಲ್ಲಿಸಿದ್ದುಂಟು. ಆ ವಿಚಾರದಲ್ಲಿ ಹಿಂದೆಯೇ ಹೆಡ್‌ಮೇಷ್ಟರಿಗೆ ಹಲವು ಬಾರಿ ಅರಿಕೆ ಮಾಡಿಕೊಂಡಿದ್ದೇನೆ. ಹೆಚ್ಚಾಗಿ ಮೇಷ್ಟುಗಳನ್ನು ಕಳಿಸಿಕೊಡಲಿಲ್ಲ, ಪರಿಹಾರ ದೊರೆಯಲಿಲ್ಲ, ಸಂಘದ ಸಭೆಗಳಲ್ಲಿ, ತಮ್ಮ ಅಧ್ಯಕ್ಷತೆಯಲ್ಲಿಯೇ ರೆಜಲ್ಯೂಷನ್ನುಗಳನ್ನು ಮಾಡಿದ್ದೇವೆ ; ಮೇಲಕ್ಕೆ ಕಳಿಸಿದ್ದೇವೆ. ಪರಿಹಾರ ದೊರೆಯಲಿಲ್ಲ. ಇನ್ನು ಮುಷ್ಕರ ಹೂಡದೆ ಏನು ಮಾಡಬೇಕು ? ಇತರ ಮೇಷ್ಟ್ರುಗಳು ಭಯಸ್ಥರು ; ಆತ್ಮಗೌರವ ಎಂಬುದನ್ನು ತಿಳಿಯದವರು. ನಾನು ಪುಂಡ ! ಮುಷ್ಕರ ಹೂಡಿದೆ! ರೇಂಜಿನಲ್ಲಿ ನೂರಾರು ಜನ ನನ್ನಂತೆಯೇ ಮುಷ್ಕರ ಹೂಡಿದ್ದಿದ್ದರೆ ಸರ್ಕಾರ ಕಣ್ಣು ಬಿಟ್ಟು ನೋಡಿ ಪರಿಹಾರ ಕೊಡುತ್ತಿತ್ತು !'