ಪುಟ:ರಂಗಣ್ಣನ ಕನಸಿನ ದಿನಗಳು.pdf/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮೬

ರಂಗಣ್ಣನ ಕನಸಿನ ದಿನಗಳು

ಬರೆಯಬಹುದೇ ? ಅವರು ಮೆಮೋ ಪುಸ್ತಕದಲ್ಲಿ ಬರೆದು ಆಳಿನ ಹತ್ತಿರ ಕೊಟ್ಟು ಕಳಿಸಿದರು. ನಾನು ಪಾಠ ಮಾಡುತ್ತಿದ್ದರೆ ಆಳು ತಂದು ನನ್ನ ಮುಖಕ್ಕೆ ಹಿಡಿದ ! ಸ್ವಾಮಿ ! ನನ್ನ ಸ್ವಭಾವಕ್ಕೂ ಆ ಆಳು ಮಾಡಿದ್ದಕ್ಕೂ ಹೊಂದುತ್ತದೆಯೇ ? ಅವನಿಗೆ ಕಪಾಳಕ್ಕೆ ಎರಡು ಬಿಗಿದೆ! ಇದು ತಪ್ಪೇ ಸ್ವಾಮಿ ? ಹೆಡ್‌ಮೇಷ್ಟ್ರು ಬಂದು ಕೇಳಿದಾಗ ಹಾಗೆಲ್ಲ ಮೆಮೋ ಮಾಡಬೇಡಿ ಎಂದು ಗದರಿಸಿದೆ, ಪುನಃ ಆ ಹೆಡ್‌ಮೇಷ್ಟ್ರು ಅದೇ ಮೆಮೋ ಪುಸ್ತಕದಲ್ಲಿ ನನ್ನ ಸಮಜಾಯಿಷಿ ಕೇಳಿ ಮತ್ತೆ ಬರೆದು ಕಳಿಸಿದರು. ನಾನು ಆ ಪುಸ್ತಕವನ್ನೇ ಕಿತ್ತುಕೊಂಡು ಹತ್ತಿರ ಇಟ್ಟುಕೊಂಡೆ. ತಾವು ನ್ಯಾಯ ಹೇಳಿ ಸ್ವಾಮಿ ! ನಾನು ಪುಂಡ ! ಒಪ್ಪಿ ಕೊಳ್ಳುತ್ತೇನೆ. ನನ್ನ ಮಾತಿಗೆ ಬರಬಾರದೆಂದು ತಿಳಿದಿದ್ದರೂ ಸಹ ನನಗೆ ಅಸಮಾನ ಮಾಡಬೇಕೆಂದು ಅವರು ಎಲ್ಲವನ್ನೂ ಮಾಡಿದರು. ಜೊತೆಗೆ ತಮ್ಮ ಹತ್ತಿರ ಬಂದು ಚಾಡಿಗಳನ್ನೂ ಹೇಳಿದರು. ನಾನು ಎಲ್ಲವನ್ನೂ ಸೈರಿಸಿಕೊಂಡು, - ಮಕ್ಕಳೊಂದಿಗರು ನೀವು! ಹುಷಾರಾಗಿರಿ!- ಎಂದು ಹೇಳಿದೆ.'

ರಂಗಣ್ಣನು ಹಾಗೆಯೇ ಆಲೋಚನೆ ಮಾಡುತ್ತ ಎರಡು ನಿಮಿಷ ಸುಮ್ಮನಿದ್ದನು. ಉಗ್ರಪ್ಪನೂ ಎರಡು ನಿಮಿಷಗಳ ಕಾಲ ಸುಮ್ಮನಿದ್ದನು. ಏನಾದರೊಂದನ್ನು ಹೇಳಿ ಆ ಸಂಕಷ್ಟ ಸನ್ನಿವೇಶದಿಂದ ಪಾರಾಗಬೇಕೆಂದು ರಂಗಣ್ಣನು.

'ಮೇಷ್ಟ್ರೆ ! ನಾನು ಸ್ಕೂಲಿಗೆ ಬಂದ ದಿನ ನೀವು ವಿನಯದಿಂದ, ವಿಧೇಯತೆಯಿಂದ, ನಡೆದುಕೊಂಡಿದ್ದಿದ್ದರೆ ಈ ವಿಷಾದ ಪ್ರಕರಣವೇ ಆಗುತ್ತಿರಲಿಲ್ಲ. ನನ್ನ ವಿಚಾರದಲ್ಲಿಯೂ ಒರಟೊರಟಾಗಿ ನಡೆದುಕೊ೦ಡಿರಿ ” ಎಂದು ಹೇಳಿದನು.

'ಸ್ವಾಮಿ ! ತಾವು ನನ್ನನ್ನು ಸಸ್ಪೆಂಡ್ ಮಾಡುವ ಸಂಕಲ್ಪದಿಂದಲೇ ಆ ದಿನ ಪಾಠಶಾಲೆಗೆ ಬಂದಿರಿ! ನಾನು ವಿನಯದಿಂದ ಹೇಳಿದ್ದರೂ ನನ್ನನ್ನು ರೇಗಿಸಿ ನನ್ನ ಬಾಯಿಯಲ್ಲಿ ಏನಾದರೂ ಮಾತನ್ನು ಹೊರಡಿಸಿ ಸಸ್ಪೆಂಡ್ ಮಾಡುತ್ತಿದ್ದಿರಿ. ತಮಗೆ ನನ್ನ ಮೇಲಿನ ದ್ವೇಷಕ್ಕಿಂತ ಹೆಚ್ಚಾಗಿ ಕಲ್ಲೇಗೌಡ ಮತ್ತು ಕರಿಯಪ್ಪನವರ ಮೇಲೆ ಛಲ ! ಅವರ ಏಜೆಂಟ್ ನಾನು ಎಂಬುದು ತಮಗೆ ತಿಳಿದಿತ್ತು. ನಾವು ಬೆಂಗಳೂರಿಗೆ ಸಹ ಹೋಗಿ,