ಪುಟ:ರಂಗಣ್ಣನ ಕನಸಿನ ದಿನಗಳು.pdf/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೦

ರಂಗಣ್ಣನ ಕನಸಿನ ದಿನಗಳು

ಅವರನ್ನು ಆಶ್ರಯಿಸುತ್ತ, ತಾವು ದೊಡ್ಡ ಮುಖಂಡರೆಂದೂ ತಮ್ಮ ಮಾತು ಸರಕಾರದಲ್ಲಿ ನಡೆಯುತ್ತದೆಂದೂ ಆಜ್ಞಾನಿಗಳಾದ ಹಳ್ಳಿಯವರಿಗೆ ತೋರಿಸುತ್ತ ಸ್ವಾರ್ಥವನ್ನು ಸಾಧಿಸಿಕೊಳ್ಳುವುದು ! ಎಲ್ಲರ ಹೇಯಕೃತ್ಯಗಳನ್ನೂ ತಿಳಿದಿದ್ದೇನೆ. ನಾನು ಸಹ ಮುಖಂಡರುಗಳ ಮಾತಿನಂತೆ ಅವರು ಕೊಡುತ್ತಿದ್ದ ಹಣದಾಸೆಗಾಗಿ ಅವರ ಏಜೆಂಟಾಗಿ ಮಾಡಬಾರದ ಕೆಲಸಗಳನ್ನು ಮಾಡಿದ್ದೇನೆ ! ಹೆಚ್ಚಾಗಿ ಏಕೆ ಹೇಳಲಿ ! ತಮ್ಮ ವಿಚಾರದಲ್ಲಿಯೂ ನಾನು ಅಪರಾಧ ಮಾಡಿದ್ದೇನೆ ! ಆ ತಿಮ್ಮಮ್ಮನನ್ನು ಡೈರೆಕ್ಟರ್ ಸಾಹೇಬರ ಬಳಿಗೆ ಕರೆದುಕೊಂಡು ಹೋದವನೇ ನಾನು !: ಪ್ರಪಂಚವನ್ನು ನೋಡಿ ಜುಗುಪ್ಸೆಯುಂಟಾಗಿದೆ. ತಾವು ಸರಳ ಸ್ವಭಾವದವರು ; ತಮಗೆ ಲೋಕ ತಿಳಿಯದು. ಈಗ ನಾನು ಗವಿಮಠಕ್ಕೆ ಹೋಗುವುದರಿಂದ ಆ ರಾಜಕೀಯ ಮುಖಂಡರ ಏಜೆಂಟ್ ಕೆಲಸ ತಪ್ಪುತ್ತದೆ ಸ್ವಾಮಿ! ಮುಂದೆ ದೇವರ ಏಜೆಂಟ್ ಆಗಿ ಕೆಲಸ ಮಾಡುತ್ತೇನೆ ! ಶಾಂತವೀರ ಸ್ವಾಮಿಯಾಗಿ ದೇವರ ಹೆಸರಿನಲ್ಲಿ ದುಡಿಯುತ್ತೇನೆ !

ರಂಗಣ್ಣನಿಗೆ ಉಗ್ರಪ್ಪನ ಚರಿತ್ರೆಯೆಲ್ಲ ಒಂದು ಅದ್ಭುತ ಪವಾಡವಾಗಿ ಕಂಡು ಬಂತು. ಯಾವ ಕಾಲಕ್ಕೆ ಏನು ಪರಿವರ್ತನೆ ಮನುಷ್ಯನಲ್ಲಾಗಬಹುದೋ ! ತಿಳಿದವರಾರು ? ನಾರದ ಮಹರ್ಷಿಗಳು ಒಬ್ಬ ಕಿರಾತನನ್ನು ವಾಲ್ಮೀಕಿಯನ್ನಾಗಿ ಮಾಡಿದರು. ಮಹಾತ್ಮ ಗಾಂಧಿಯವರು ಪರೋಕ್ಷದಲ್ಲಿದ್ದು ಕೊಂಡೆ ಉಗ್ರಪ್ಪನನ್ನು ಶಾಂತವೀರಸ್ವಾಮಿಯಾಗಿ ಮಾಡಿದರು ! ಎಂತಹ ಅದ್ಭುತ ! ಎಂತಹ ಪವಾಡ !

'ಸ್ವಾಮಿ ! ನಾನು ಹೋಗಿ ಬರುತ್ತೇನೆ. ತಮ್ಮನ್ನು ಪುನಃ ಕಾಣುವುದಕ್ಕೆ ಅವಕಾಶವಾಗುವುದಿಲ್ಲ. ಗವಿಮಠಕ್ಕೆ ಬರಬೇಕು ! ಆತಿಥ್ಯ ಸ್ವೀಕಾರ ಮಾಡಬೇಕು !'

'ಆಗಲಿ ಮೇಷ್ಟೇ ! ಖಂಡಿತವಾಗಿ ಬರುತ್ತೇನೆ.'


'ಶ್ರೇಯೋಸ್ತು !' ಎಂದು ಉಗ್ರಪ್ಪನು ಹೇಳಿ ಹೊರಕ್ಕೆ ಬಂದುದೊಣ್ಣೆಯನ್ನು ಕೈಗೆ ತೆಗೆದುಕೊಂಡು ಹೊರಟುಹೋದನು.

ರಂಗಣ್ಣನು ದೀರ್ಘಾಲೋಚನೆಯಲ್ಲಿ ಮಗ್ನನಾದನು.