ಪುಟ:ರಂಗಣ್ಣನ ಕನಸಿನ ದಿನಗಳು.pdf/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೨೭

ಸಮಯೋಪಾಯ ಸರಸ್ವತಿ

ಕೆಲವು ದಿನಗಳ ತರುವಾಯ ಸಾಹೇಬರಿಂದ ಉಗ್ರಪ್ಪನ ವಿಚಾರದಲ್ಲಿ ಹುಕುಮುಗಳು ಬಂದುವು. ಆವನಿಗಾದ ಶಿಕ್ಷೆಯನ್ನು ಖಾಯಂ ಪಡಿಸಿ, ಅವನನ್ನು ಅದೇ ಜಿಲ್ಲೆಯಲ್ಲಿಯೇ ಬೇರೆ ರೇಂಜಿಗೆ ವರ್ಗ ಮಾಡಿದ್ದರು. ರಂಗಣ್ಣನಿಗೆ ಆ ಹುಕುಮುಗಳನ್ನು ನೋಡಿ ಸಂತೋಷವೇನೂ ಆಗಲಿಲ್ಲ. ಉಗ್ರಪ್ಪ ಈಗ ಶಾಂತವೀರ ಸ್ವಾಮಿಯಾಗಿ ಪರಿವರ್ತನೆ ಹೊಂದಿ ಶಿಷ್ಯ ಸಮೂಹಕ್ಕೆ ಗುರುವಾಗಿ ಉಪದೇಶಮಾಡುತ್ತ ಆಧ್ಯಾತ್ಮಿಕ ವಿಚಾರಗಳಲ್ಲಿ ಮಗ್ನನಾಗಿರುವುದು ಒಂದು ದೊಡ್ಡ ಪವಾಡವಾಗಿ ಅವನಿಗೆ ಬೋಧೆಯಾಗುತ್ತಿತ್ತು. ಈ ಪರಿವರ್ತನೆಗೆ ತಾನು ಕಾರಣನಾದುದು ಎಂತಹ ದೈವ ಘಟನೆ ಎಂದು ವಿಷಾದವೂ ವಿಸ್ಮಯವೂ ಅವನ ಮನಸ್ಸಿನಲ್ಲಿ ತುಂಬಿದ್ದುವು. ಉಗ್ರಪ್ಪನು ತಾನು ಹಿಂದೆ ತಿಳಿಸಿದ್ದಂತೆ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟು ಹೊರಟು ಹೋಗಿದ್ದನು. ಅವನು ಮಠಾಧ್ಯಕ್ಷಸ್ಥಾನ ಸ್ವೀಕಾರ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ರಂಗಣ್ಣನಿಗೆ ಕಳಿಸಿದ್ದನು. ಆದರೆ ರಂಗಣ್ಣನು ಆ ಮಹೋತ್ಸವಕ್ಕೆ ಹೋಗಲಿಲ್ಲ.

ಕಾಲಕ್ರಮದಲ್ಲಿ ರಂಗಣ್ಣನಿಗೆ ವರ್ಗದ ಆರ್ಡ ರೂ ಬಂತು. ಅದನ್ನು ಅವನು ನಿತ್ಯವೂ ನಿರೀಕ್ಷಿಸುತ್ತಲೇ ಇದ್ದುದರಿಂದ ಅವನಿಗೆ ಹರ್ಷವಾಗಲಿ ವಿಷಾದವಾಗಲಿ ಉಂಟಾಗಲಿಲ್ಲ. ಆ ವರ್ಗದ ಆರ್ಡರಿನಿಂದ ತನ್ನ ಹೆಂಡತಿಗೆ ಸ್ವಲ್ಪ ಖೇದವಾಗಬಹುದೆಂದು ಮಾತ್ರ ಆಲೋಚಿಸಿದನು. ಆದ್ದರಿಂದ ಆರ್ಡರು ಬಂದ ದಿನ ಒಡನೆಯೇ ಮನೆಯಲ್ಲಿ ವರ್ತಮಾನ ಕೊಡದೆ ಸುಮುಹೂರ್ತದಲ್ಲಿ ಅದನ್ನು ತಿಳಿಸೋಣವೆಂದು ಸುಮ್ಮನಾದನು, ಆದರೆ ವರ್ಗವಾಗಿರುವ ಸಂಗತಿ ಒಂದೆರಡು ದಿನಗಳಲ್ಲಿಯ ಜನಾರ್ದನಪುರದಲ್ಲಿ ಹರಡಿತು.