ಪುಟ:ರಂಗಣ್ಣನ ಕನಸಿನ ದಿನಗಳು.pdf/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೨

ರಂಗಣ್ಣನ ಕನಸಿನ ದಿನಗಳು

ಭಾನುವಾರ ಸುಖಭೋಜನ ಮಾಡಿ ತಾಂಬೂಲಚರ್ವಣಮಾಡುತ್ತ ಕುಳಿತಿದ್ದಾಗ, ತನ್ನ ಮಕ್ಕಳು ನಾಗೇನಹಳ್ಳಿಯಲ್ಲಿ ಆದ ಮೆರವಣಿಗೆಯನ್ನು ಅನುಕರಣಮಾಡುತ್ತ ಊದುವ ಕೊಳವಿಯನ್ನು ಕೊಂಬನ್ನಾಗಿಯೂ, ಜಾಗಟೆಯನ್ನೇ ತಮಟೆಯನ್ನಾಗಿಯೂ ಮಾಡಿಕೊಂಡು ಹಾಲಿನಲ್ಲಿ ಗಲಾಟೆಮಾಡುತ್ತಿದ್ದಾಗ, ಆ ನೋಟವನ್ನು ತನ್ನ ಹೆಂಡತಿ ನೋಡಿ,

'ನಿಮ್ಮ ದೊಡ್ಡ ಮಗ ನಿಮ್ಮಂತೆಯೇ ಇನ್ ಸ್ಪೆಕ್ಟರ್‌ಗಿರಿ ಮಾಡುತ್ತಾನೆಂದು ಕಾಣುತ್ತೆ ! ನಿಮ್ಮ ರುಮಾಲು ಹಾಕಿಕೊಂಡು ನಿಮ್ಮಂತೆಯೇನಡೆಯುತ್ತಿದಾನೆ !' ಎಂದು ಗಮನವನ್ನು ಸೆಳೆದಾಗ,

'ನನ್ನ ಇನ್‌ಸ್ಪೆಕ್ಟರ್ ಗಿರಿ ನನ್ನ ಮಗನಿಗೆ ಏನೂ ಬೇಡ, ಸದ್ಯ: ನನಗೆ ತಪ್ಪಿದ್ದಕ್ಕೆ ನಾನು ಸಂತೋಷಪಡುತ್ತಿದ್ದೇನೆ' ಎಂದು ರಂಗಣ್ಣ ಹೇಳಿದನು.

'ನಿಮಗೆ ವರ್ಗದ ಆರ್ಡರು ಬಂತೇ ? ನನಗೇತಕ್ಕೆ ಮೊದಲೇ ಹೇಳಲಿಲ್ಲ ?'

'ವರ್ಗದ ಆರ್ಡರು ಬಂದು ಹೆಚ್ಚು ಕಾಲ ಏನೂ ಆಗಲಿಲ್ಲ. ದೊಡ್ಡ ಸಾಹೇಬರಿಗೆ ಕಾಗದ ಬರೆದಿದ್ದೆ. ಅವರಿಂದ ಈ ದಿನ ಜವಾಬು ಬಂತು. ವರ್ಗದ ಆರ್ಡರನ್ನು ರದ್ದು ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಈಗ ನಿನಗೂ ತಿಳಿಸಿದ್ದೇನೆ.'

'ನಿಮ್ಮನ್ನು ಎಲ್ಲಿಗೆ ವಗ೯ ಮಾಡಿದ್ದಾರೆ ? ಏನಾಗಿ ವರ್ಗ ಮಾಡಿದ್ದಾರೆ ?'

'ಏನೋ ಸ್ಪೆಷಲ್ ಆಫೀಸರ್ ಅಂತೆ ! ಸದ್ಯಕ್ಕೆ ಬೆಂಗಳೂರಿಗೆ ಹೋಗಬೇಕು. ದೊಡ್ಡ ಸಾಹೇಬರನ್ನು ಕಂಡು ವಿವರಗಳನ್ನು ತಿಳಿದುಕೊಳ್ಳಬೇಕು,'

'ನನಗೆ ಆ ದಿನವೇ ಮನಸ್ಸಿಗೆ ಹೊಳೆಯಿತು ! ನೀವು ಜನರನ್ನೆಲ್ಲ ಎದುರು ಹಾಕಿಕೊಂಡು ಹೋಗುತ್ತಿದ್ದೀರಿ; ಆದ್ದರಿಂದ ಇಲ್ಲಿ ಹೆಚ್ಚು ಕಾಲ ನಿಮ್ಮನ್ನು ಇಟ್ಟಿರುವುದಿಲ್ಲ~ ಎಂದು ಮನಸ್ಸಿಗೆ ಹೊಳೆಯಿತು. ಹಾಗೆಯೇ ಆಯಿತು.”