ಪುಟ:ರಂಗಣ್ಣನ ಕನಸಿನ ದಿನಗಳು.pdf/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಮಯೋಪಾಯ ಸರಸ್ವತಿ

೨೯೩

'ನನ್ನನ್ನು ಆಕ್ಷೇಪಿಸುವುದಕ್ಕೆ ನೀನೂ ಒಬ್ಬಳು ಸೇರಿಕೊಂಡೆಯೋ? ನಾನೇನು ಜನರನ್ನು ಎದುರು ಹಾಕಿಕೊಂಡದ್ದು ? ನೀನೇ ನೋಡಿದೀಯೇ: ಆವಲಹಳ್ಳಿಯ ಗೌಡರು, ರಂಗನಾಥಪುರದ ಗೌಡರು, ಹಲವು ಗ್ರಾಮ ಪಂಚಾಯತಿ ಚೇರ್ಮನ್ನರುಗಳು - ಎಲ್ಲರೂ ಹೇಗೆ ವಿಶ್ವಾಸವಾಗಿದ್ದಾರೆ, ಎಲ್ಲರ ಸ್ನೇಹ ಮತ್ತು ಗೌರವಗಳನ್ನು ನಾನು ಹೇಗೆ ಸಂಪಾದಿಸಿ ಕೊಂಡಿದ್ದೇನೆ. ಆದರೂ ನನ್ನನ್ನು ಟೀಕಿಸುತ್ತೀಯೆ !

'ನೀವು ಸಾವಿರ ಹೇಳಿ ! ಏನು ಪ್ರಯೋಜನ ? ನಿಮಗೆ ಸ್ವಲ್ಪ ಕೋಪ ಹೆಚ್ಚು ; ನಿಮ್ಮ ಇಷ್ಟಕ್ಕೆ ವಿರೋಧವಾಯಿತೋ ತಾಳ್ಮೆ ಇರುವುದಿಲ್ಲ, ಸುರ್ರೆಂದು ಸಿಟ್ಟು ಬರುತ್ತದೆ ! ಬುಸ್ಸೆಂದು ಹೆಡೆ ಬಿಚ್ಚುತ್ತೀರಿ! ಉಪಾಯ ಮಾಡ ಬೇಕಾದ ಕಡೆ ಅಧಿಕಾರ ಮತ್ತು ದರ್ಪ ತೋರಿಸು

'ಎಲ್ಲಿ, ಯಾವಾಗ ಹಾಗೆ ತೋರಿಸಿದ್ದೆನೆ ? ಹೇಳು. ನನಗೆ ವಿರೋಧಿಗಳಾದವರು ಎಲ್ಲಿಯೋ ಮೂರು ಜನ, ಅವರು ನೀಚರು. ಆ ಕರಿಯಪ್ಪ ತನ್ನ ಅಣ್ಣನ ಮಗನಿಗೆ ಸ್ಕಾಲರ್ ಷಿಪ್ಪನ್ನು ಕೊಡಿಸಿದ್ದ. ಯಾರೋ ಅರ್ಜಿ ಹಾಕಿದರು. ವಿಚಾರಣೆ ಮಾಡಬೇಕಾಯಿತು ; ಮೇಲಿನ ಸಾಹೇಬರಿಗೆ ಕಾಗದಗಳನ್ನು ಹೊತ್ತು ಹಾಕಿದೆ. ಅವರ ಆರ್ಡರ್ ನಂತೆ ನಡೆದುಕೊಂಡೆ. ನನ್ನದೇನು ತಪ್ಪು ??

'ನೀವೇಕೆ ಅದನ್ನೆಲ್ಲ ಮೈ ಮೇಲೆ ಹಾಕಿಕೊಂಡು ಹೋಗಬೇಕಾಗಿತ್ತು ? ಸಾಲದ್ದಕ್ಕೆ ಮುಖಂಡ ಅನ್ನಿಸಿಕೊಂಡ ಆ ಮನುಷ್ಯನಿಗೆ ಆಪಮಾನ ಮಾಡಿ ಬಯಲಿಗೆಳೆದಿರಿ. ಹಾಗೆ ಅಪಮಾನ ಮಾಡಿದರೆ ಅವನಿಗೆ ನಿಮ್ಮ ಮೇಲೆ ದ್ವೇಷ ಹುಟ್ಟುವುದಿಲ್ಲವೇ ? ಅರ್ಜಿ ಬಂದಾಗ ನೀವು ಆತನನ್ನು ಕಂಡು- ಹೀಗೆ ಅರ್ಜಿ ಬಂದಿದೆ. ಇದರ ವಿಚಾರ ಏನು ? ಆ ಹುಡುಗ ನಿಮ್ಮ ಅಣ್ಣನ ಮಗನೇ ಏನು ? ಫೈಲಾದ ಹುಡುಗನಿಗೆ ಹೀಗೆ ಸ್ಕಾಲರ್ ಷಿಪ್ಪು ಕೊಡುವುದು ಸರಿಯಲ್ಲವಲ್ಲ. ಗಲಭೆಗೆ ಕಾರಣವಾಗುತ್ತದೆ ; ನಿಮ್ಮ ಹೆಸರು ಕೆಡುತ್ತದೆ-ಎಂದು ಉಪಾಯದಿಂದ ತಿಳಿಸಿದ್ದಿದ್ದರೆ, ಆತನ ಸ್ನೇಹವನ್ನು ಸಂಪಾದಿಸುತ್ತಿದ್ದಿರಿ, ಮತ್ತು ಆತನೇ ಸ್ಕಾಲರ್