ಪುಟ:ರಂಗಣ್ಣನ ಕನಸಿನ ದಿನಗಳು.pdf/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಮಯೋಪಾಯ ಸರಸ್ವತಿ

೨೯೫

ನಡೆಯುತ್ತವೆ. ಆ ಕರಿಯಪ್ಪನೊಬ್ಬನೇ ದೋಷಿಯೇ? ಹಳ್ಳಿಯಲ್ಲಿ ಹುಟ್ಟಿ ಬೆಳೆದವನು ! ದೊಡ್ಡವರ ಹತ್ತಿರ ಓಡಾಡಿಕೊಂಡು ಮುಖಂಡ ಎಂದು ಅನ್ನಿಸಿಕೊಂಡವನು !

'ನನಗೆ ತಿಳಿಯದೇ ಹೋಯಿತು ! ನೀನೇಕೆ ನನಗೆ ಆ ವಿಚಾರದಲ್ಲಿ ಸಲಹೆ ಕೊಡಲಿಲ್ಲ ? ಈಗ ನನಗೆ ಬುದ್ಧಿ ಹೇಳುವುದಕ್ಕೆ ಮಾತ್ರ ನೀನು ಬರುತ್ತೀಯಲ್ಲ !!

'ನನಗೆ ಆ ವಿಚಾರಗಳನ್ನು ನೀವು ಮೊದಲೇ ತಿಳಿಸಿದಿರಾ ? ಕಚೇರಿಯ ವಿಷಯ ಎಂದು ಗುಟ್ಟಾಗಿಟ್ಟು ಕೊಂಡಿದ್ದಿರಿ. ಎಲ್ಲ ಆದಮೇಲೆ – ಹೀಗೆ ಮಾಡಿದೆ, ಹಾಗೆ ಮಾಡಿದೆ ಎಂದು ನನ್ನ ಹತ್ತಿರ ಜ೦ಬ ಕೊಚ್ಚಿಕೊಳ್ಳುತ್ತಿದ್ದಿರಿ. ನಾನಾಗಿ ನಿಮ್ಮನ್ನು ಏತಕ್ಕೆ ಕೆದಕಿ ಕೇಳಬೇಕು? ಮಾತಿಗೆ ಮೊದಲು ಸ್ತ್ರೀ ಬುದ್ಧಿಃ ಪ್ರಳಯಾಂತಿಕಾ ಎಂದು ಜರೆಯುತ್ತೀರಿ !

ರಂಗಣ್ಣನಿಗೆ ಸಮಯೋಪಾಯ ಎಂದರೆ ಏನು ? ಟ್ಯಾಕ್ಟ್ ಎಂದು ಮೇಲಿನವರು ಹೇಳುತ್ತಿದ್ದುದರ ಅರ್ಥವೇನು? ಎಂಬುದು ಆಗ ಸ್ಸುರಿಸಿತು. ಅನುಭವ ಹೆಚ್ಚಿದಂತೆಲ್ಲ ಸಮಯೋಪಾಯಗಳು ಹೊಳೆಯುತ್ತವೆ ಎಂಬ ತಿಳಿವಳಿಕೆಯೂ ಬಂತು. ಆಗ ಕರಿಯಪ್ಪನ ಮೇಲೆ ಅವನಿಗಿದ್ದ ದುರಭಿಪ್ರಾಯ ಕಡಿಮೆಯಾಯಿತು. ಜನರೊಡನೆ ವ್ಯವಹರಿಸುವುದು, ಅವರನ್ನು ಒಲಿಸಿಕೊಳ್ಳುವುದು, ಒಂದು ದೊಡ್ಡ ಕಲೆ. ಅದು ಕೇವಲ ಅಭ್ಯಾಸದಿಂದ ಬರತಕ್ಕದ್ದೂ ಅಲ್ಲ. ಅದು ನೈಸರ್ಗಿಕವಾಗಿ, ಕಲಿಸದೆ ಬರುವ ವಿದ್ಯೆ, ರಂಗಣ್ಣ ತಾನು ಬಹಳ ಬುದ್ಧಿವಂತನೆಂದೂ ಸಮಯೋಪಾಯಜ್ಞನೆಂದೂ ಹೆಮ್ಮೆ ಪಟ್ಟು ಕೊಳ್ಳುತ್ತಿದ್ದವನು ಈಗ ಅವನಿಗೆ ತನ್ನಹೆಂಡತಿ ತನಗಿ೦ತ ಮೇಲೆಂದೂ ಸ್ತ್ರೀ ಜಾತಿಯನ್ನು ನಿಕೃಷ್ಟವಾಗಿ ಕಾಣಬಾರದೆಂದೂ ಬೋಧೆಯಾಯಿತು. ರಂಗಣ್ಣ ಮುಗುಳುನಗೆ ನಗುತ್ತಾ,

'ಹೆಂಗಸರೂ ಸಾಹೇಬರುಗಳಾಗಬಹುದೆಂದು ನಾನು ಒಪ್ಪುತ್ತೇನೆ !' ಎಂದು ಹೇಳಿದನು. “ಆ ಕಲ್ಲೇಗೌಡನ ವಿಚಾರದಲ್ಲಿ ಏನು