ಪುಟ:ರಂಗಣ್ಣನ ಕನಸಿನ ದಿನಗಳು.pdf/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಂತವೀರಸ್ವಾಮಿಗಳ ಆತಿಥ್ಯ

೩೦೫

ತೊಟ್ಟಿಯನ್ನು ದಾಟಿ ಮುಂದಕ್ಕೆ ಹೋದರೆ ಅಲ್ಲಿ ಇನ್ನೊಂದು ತೊಟ್ಟಿ, ಅದು ಮೊದಲಿನದರಷ್ಟು ವಿಶಾಲವಾಗಿರಲಿಲ್ಲ. ಮತ್ತು ಅಲ್ಲಿ ಬೆಳಕು ಸಹ ಹೆಚ್ಚಾಗಿರಲಿಲ್ಲ ; ಜನರು ಯಾರೂ ಇರಲಿಲ್ಲ ; ಗಭೀರ ನೀರವ ಸ್ಥಾನವಾಗಿತ್ತು. ಆ ತೊಟ್ಟಿ ಯನ್ನು ದಾಟಿದ ನಂತರ ಪಾರುಪತ್ಯಗಾರನು ಕೈ ಮುಗಿದು, 'ಸ್ವಾಮಿಯವರು ಒಳಕ್ಕೆ ದಯಮಾಡಿಸಬೇಕು, ಈ ನಡು ಮನೆಯನ್ನು ದಾಟಿ ಮುಂದೆ ಹೋದರೆ ಇನ್ನೊಂದು ಸಣ್ಣ ತೊಟ್ಟಿ ಇದೆ. ಅದರ ಬಲಗಡೆಯ ಕೋಣೆಯಲ್ಲಿ ಶ್ರೀಗಳವರು ಇದ್ದಾರೆ. ಇಲ್ಲಿಂದ ಮುಂದಕ್ಕೆ ನಾನು ಬರಲು ನನಗೆ ಆಪ್ಪಣೆಯಿಲ್ಲ' ಎಂದು ಹೇಳಿ ಹಿಂದೆ ನಿಂತುಬಿಟ್ಟನು. ಮುಂದೆ ಸ್ವಲ್ಪ ಕತ್ತಲಾಗಿತ್ತು. ನಡುಮನೆಯನ್ನು ಕಷ್ಟ ಪಟ್ಟುಕೊಂಡು ದಾಟಿದ ನಂತರ ಮುಂದೆ ತೊಟ್ಟಿಯಲ್ಲಿ ಸ್ವಲ್ಪ ಬೆಳಕು ಕಂಡು ಬಂತು. ರಂಗಣ್ಣ ಆ ತೊಟ್ಟಿಯನ್ನು ಪ್ರವೇಶಿಸಿ ಬಲಗಡೆಯ ಕೊಟಡಿಯ ಬಳಿಗೆ ಬಂದಾಗ ಒಳಗಿದ್ದ ಸ್ವಾಮಿಗಳು ಗೋಚರವಾದರು. ಅವನಿಗೆ ಗುರುತೇ ಸಿಕ್ಕಲಿಲ್ಲ ! ತಲೆ ಗಡ್ಡ ಮೀಸೆಗಳನ್ನೆಲ್ಲ ಬೋಳಿಸಿಕೊಂಡು ಕಾವಿಯ ಬಟ್ಟೆಯನ್ನು ಉಟ್ಟು, ದಟ್ಟವಾಗಿ ವಿಭೂತಿಯನ್ನು ಧರಿಸಿದ್ದ ಆ ವ್ಯಕ್ತಿ ಹಿಂದೆ ಉಗ್ರಪ್ಪನಾಗಿದ್ದನೆಂದು ಹೇಳುವಂತೆಯೇ ಇರಲಿಲ್ಲ ! ಆದರೆ ಆ ಸ್ಫೂಲ ಕಾಯ, ದಪ್ಪ ತಲೆ, ಭಾರಿ ತೋಳುಗಳು- ಅವುಗಳನ್ನು ನೋಡಿದ ಮೇಲೆ ಬೇರೆ ವ್ಯಕ್ತಿಯಲ್ಲವೆಂದು ತೀರ್ಮಾನಿಸಿಕೊಂಡನು. ಸ್ವಾಮಿಗಳು ನೆಲದ ಮೇಲೆ ಹಾಸಿದ್ದ ವ್ಯಾಘ್ರಾಸನದ ಮೇಲೆ ಕುಳಿತಿದ್ದರು! ಸ್ವಲ್ಪ ದೂರದಲ್ಲಿ ಕಲ್ಲೇಗೌಡ ಮತ್ತು ಕರಿಯಪ್ಪ ಚಾಪೆಯ ಮೇಲೆ ಕುಳಿತಿದ್ದರು ! ರಂಗಣ್ಣನ ಎದೆ ಝಲ್ಲೆಂದಿತು ! ಮುಖ ವಿವರ್ಣವಾಯಿತು ! ಆದರೆ ಅಲ್ಲಿ ಹೆಚ್ಚಾಗಿ ಬೆಳಕಿರಲಿಲ್ಲವಾದುದರಿಂದ ಅವನಲ್ಲಾದ ಮಾರ್ಪಾಟು ಇತರರಿಗೆ ಕಾಣಿಸಲಿಲ್ಲ, ರಂಗಣ್ಣ ಸ್ತಬ್ಧನಾಗಿ ನಿಂತು, ಸ್ವಲ್ಪ ತೊದಲುನುಡಿಯಿಂದ, " ಪೂಜ್ಯ

ಸ್ವಾಮಿಗಳಿಗೆ ನಮಸ್ಕಾರ ! ' ಎಂದು ಹೇಳಿದನು, ಆ ಮುಖಂಡರ ಕಡೆಗೆ ತಿರುಗಿಕೊಂಡು 'ನಮಸ್ಕಾರ ! ' ಎಂದನು. ಅವರು ಸಹ ನಮಸ್ಕಾರ ಮಾಡಿದರು.

20A