ಪುಟ:ರಂಗಣ್ಣನ ಕನಸಿನ ದಿನಗಳು.pdf/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦೬

ರಂಗಣ್ಣನ ಕನಸಿನ ದಿನಗಳು

ಸ್ವಾಮಿಗಳು ತಮಗೆ ಸಮೀಪದಲ್ಲಿದ್ದ ಮಣೆ ಯನ್ನು ತೋರಿಸಿ, ಇಲ್ಲಿ ಕುಳಿತುಕೊಳ್ಳಿ. ನಮ್ಮ ಆಹ್ವಾನವನ್ನು ಮನ್ನಿಸಿ ನೀವು ಈ ದಿನ ಇಲ್ಲಿಗೆ ಬಂದದ್ದು ನಮಗೆ ಬಹಳ ಸಂತೋಷ. ಆ ಶಾಂತವೀರೇಶ್ವರನ ಅನುಗ್ರಹಕ್ಕೆ ನೀವು ಪಾತ್ರರಾದಿರಿ' ಎಂದು ಹೇಳಿದರು. ಸ್ವಾಮಿಗಳೆದುರಿಗೆ ಗರ್ಭಗುಡಿಯಲ್ಲಿ ಲಿಂಗವೊಂದಿತ್ತು. ಆಗತಾನೆ ಪೂಜೆ ಮಾಡಿದ್ದ ಹೂವು ಪತ್ರೆಗಳು ತುಂಬಿದ್ದು ವು ; ಅಲ್ಲಿ ತೂಗುದೀಪವೊಂದು ಉರಿಯುತ್ತಿತ್ತು. ರಂಗಣ್ಣ ಮಣೆಯಮೇಲೆ ಕುಳಿತುಕೊಂಡನು. ಪ್ರಯಾಣದ ವಿಷಯ ಮತ್ತು ಉಪಾಹಾರದ ವಿಷಯ ಮಾತನಾಡಿದ ಮೇಲೆ ಸ್ವಾಮಿಗಳು,

'ನಾವು ಕಲ್ಲೇಗೌಡರಿಗೂ ಕರಿಯಪ್ಪನವರಿಗೂ ಆಹ್ವಾನ ಕೊಟ್ಟಿದ್ದೆವು. ಅವರೂ ದೊಡ್ಡ ಮನಸ್ಸು ಮಾಡಿ ಇಲ್ಲಿಗೆ ಬಂದಿದ್ದಾರೆ. ನಮಗೆ ಬಹಳ ಸಂತೋಷವಾಗಿದೆ ' ಎಂದು ಹೇಳಿದರು.

ರಂಗಣ್ಣನಿಗೆ ಮಾತು ಬೆಳೆಸುವುದಕ್ಕೆ ಬುದ್ದಿ ಓಡಲಿಲ್ಲ. ಅವನು ಮೌನವಾಗಿದ್ದನು.

'ಶಾಂತವೀರೇಶ್ವರನ ಸನ್ನಿಧಿಯಲ್ಲಿ ನಾವುಗಳೆಲ್ಲ ಕಲೆತಿದ್ದೇವೆ. ನಾವು ನಿಮಗೆಲ್ಲ ಒಂದು ಮಾತನ್ನು ಹೇಳುತ್ತವೆ ; ನಡೆಸಿಕೊಡ ಬೇಕು ಕೋಪ ದ್ವೇಷ ಮೊದಲಾದುವು ಮನುಷ್ಯನಿಗೆ ಶ್ರೇಯಸ್ಕರಗಳಲ್ಲ, ವಿಶ್ವ ಕಲ್ಯಾಣವಾಗಬೇಕಾದರೆ ಪ್ರೇಮದಿಂದಲೇ ಸಾಧ್ಯ. ಒಂದುವೇಳೆ ಇತರರು ನಮ್ಮ ಮೇಲೆ ಕೋಪ ಮಾಡಿಕೊಂಡರೂ ನಾವು ಶಾಂತರಾಗಿಯೇ ಇರಬೇಕು-ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ ? ಅವರಿಗಾದಡೇನು ? ತನಗಾದಡೇನು ? ತನುವಿನ ಕೋಪ ತನ್ನ ಹಿರಿಯತನದ ಕೇಡು ; ಮನದ ಕೋಪ ತನ್ನ ಅರಿವಿನ ಕೇಡು ಮನೆಯೊಳಗಣ ಕಿಚ್ಚು ತನ್ನ ಮನೆ ಸುಟ್ಟಲ್ಲದೆ ನೆರೆಮನೆ ಬೇವುದೇ ಕೂಡಲ ಸಂಗಮದೇವಾ - ಎಂದು ಹಿರಿಯ ಅನುಭವಿಗಳೊಬ್ಬರು ಹೇಳಿದ್ದಾರೆ. ಹಿಂದೆ ನಿಮ್ಮ ನಿಮ್ಮ ವ್ಯವಹಾರಗಳಲ್ಲಿ ಕೆಲವು ವಿಷಾದ ಘಟನೆಗಳು ನಡೆದು ಹೋದುವು; ಪರಸ್ಪರವಾಗಿ ಮನಸ್ತಾಪಗಳೂ ವೈರವೂ ಬೆಳೆದುಹೋದುವು. ಈಗ ಅವು ಗಳನ್ನೆಲ್ಲ ಮರೆತುಬಿಟ್ಟು ನೀವು ನೀವು ಸ್ನೇಹದಿಂದಿರಬೇಕು. ನಮ್ಮ