ಪುಟ:ರಂಗಣ್ಣನ ಕನಸಿನ ದಿನಗಳು.pdf/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಖಂಡರನ್ನೆಲ್ಲ ತಪ್ಪು ದಾರಿಗೆ ಎಳೆದವರು ಸರಕಾರದ ಉನ್ನತಾಧಿಕಾರಿಗಳಲ್ಲಿ ಕೆಲವರು ಮತ್ತು ಹೊರಗಿನವರು. ಮದರಾಸಿನಲ್ಲಿ ಇಂಗ್ಲಿಷರು ಭೇದೋಪಾಯವನ್ನು ಹೂಡಿ ಕೋಮುವಾರು ವಿಷವನ್ನು ಜನಜೀವನದಲ್ಲಿ ಹರಿಸಿದರು. ನಮ್ಮ ಸೀಮೆಯಲ್ಲಿಯೂ ಅದು ತಲೆದೋರಿತು. ಡಾಕ್ಟರ್ ಲಾಯರ್ ಗೀಯರ್ ಎಂದು ಹೇಳಿಕೊಳ್ಳುವ ಮುಖಂಡರ ಅಪರಾವತಾರಗಳು ಇಲ್ಲಿ ತಲೆಯೆತ್ತಿದರು. ಸಾಲದುದಕ್ಕೆ ನಮ್ಮ ದೊಡ್ಡ ಅಧಿಕಾರಿಗಳೂ ತಮ್ಮ ಕೈವಾಡ ತೋರಿಸಿದರು. ನಮ್ಮ ಮುಖಂಡರನ್ನು ಆಶ್ರಯಿಸಿ, ಸಲಹೆಗಳನ್ನು ಕೊಟ್ಟು, ಸರಕಾರದ ರಹಸ್ಯ ವರ್ತಮಾನಗಳನ್ನೆಲ್ಲ ತಿಳಿಸಿ, ಅಂಕಿ ಅಂಶಗಳನ್ನು ಒದಗಿಸಿ, ಸಭೆಗಳಲ್ಲಿ ದೊಡ್ಡ ಗೊಂದಲವೆಬ್ಬಿಸುವಂತೆ ಚಿತಾವಣೆ ಮಾಡಿದರು. ಹೀಗೆ ಸರಕಾರದ ಅಧಿಕಾರಿಗಳು ತಮ್ಮ ಕೈವಶವಾದುದನ್ನು ನೋಡಿ ಮುಖಂಡರೂ ಸ್ವಾರ್ಥ ಸಾಧಕರಾದರು ; ಸರಕಾರವೆಂದರೆ ಗೌರವವೇ ಇಲ್ಲದಂತಾಯಿತು. ಆದ್ದರಿಂದ ನಮ್ಮ ನಾಡಿನ ಜನಜೀವನ ಕೆಳಮಟ್ಟಕ್ಕಿಳಿಯಿತು. ಮುಂದೆ ಕೋಮುವಾರು ವಿಷ ಕ್ರಮಕ್ರಮವಾಗಿ ಮಾಯವಾಗುತ್ತದೆ. ಎಲ್ಲರೂ ಅಣ್ಣತಮ್ಮಂದಿರಂತೆ ನಡೆದುಕೊಳ್ಳುವ ಕಾಲ ಬರುತ್ತದೆ. ಮಹಾತ್ಮಾ ಗಾಂಧಿಯವರ ತಪಸ್ಸಿನ ಫಲವಾಗಿ ಇಂಗ್ಲಿಷರು ಈ ದೇಶವನ್ನು ಬಿಟ್ಟು ಹೊರಟು ಹೋಗುವುದು ಖಂಡಿತ ! ಇನ್ನೆಲ್ಲ ಹತ್ತು ಹದಿನೈದು ವರ್ಷ ಗಳು ಮಾತ್ರ ಕಾಯಬೇಕು. ಸ್ವಾತಂತ್ರಯುಗ ಕಾಲಿಟ್ಟಾಗ ದೇಶಾಭ್ಯುದಯ ಕಾರ್ಯಗಳಿಗೆ ಎಲ್ಲರೂ ಭುಜಕ್ಕೆ ಭುಜ ಕೊಟ್ಟು ನಿಲ್ಲಬೇಕಾಗುತದೆ. ಆದ್ದರಿಂದ ನೀವು ಮನಸ್ಸಿನಲ್ಲಿ ವಿಷಾದಪಡದೆ ಈ ಮುಖಂಡರ ಸ್ನೇಹ ಹಸ್ತವನ್ನು ಹಿಡಿಯಬೇಕು ಎಂಬುದು ನಮ್ಮ ಕೋರಿಕೆ. ಏನು ಹೇಳುತ್ತೀರಿ ?

'ಸ್ವಾಮಿಯವರ ಆಪ್ಪಣೆ ! ” ಎನ್ನುತ್ತಾ ರಂಗಣ್ಣನು ಮುಖಂಡರ ಸಮೀಪಕ್ಕೆ ಹೋಗಿ ಅವರ ಕೈ ಕುಲುಕಿ, ' ಕರಿಯಪ್ಪನವರೇ ! ಕಲ್ಲೇಗೌಡರೇ ! ನಾನು ನಿಮ್ಮಗಳ ವಿಚಾರದಲ್ಲಿ ಏನು ಆಪರಾಧ ನಡೆಸಿದ್ದರೂ ನೀವು ಕ್ಷಮಿಸಬೇಕು' ಎಂದು ಹೇಳಿದನು. ರಂಗಣ್ಣನ ಕಣ್ಣುಗಳು ಹನಿಗೂಡಿದವು.