ಪುಟ:ರಂಗಣ್ಣನ ಕನಸಿನ ದಿನಗಳು.pdf/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೨೯

ನಿರ್ಗಮನ ಸಮಾರಂಭ

ಮಾರನೆಯ ದಿನ ಬೆಳಗ್ಗೆ ಏಳು ಗಂಟೆಗೆ ರಂಗಣ್ಣ ಕಾಫಿ ಸೇವನೆ ಮಾಡಿ ತನ್ನ ಕೊಠಡಿಗೆ ಹಿಂದಿರುಗುತ್ತಿದ್ದಾಗ ಮುಂದಿನ ಒಪ್ಪಾರದಲ್ಲಿ ಯಾರೋ ಮೇಷ್ಟ್ರು ನಿಂತಿದ್ದುದು ಅವನ ಕಣ್ಣಿಗೆ ಬಿತ್ತು. ತನಗೆ ವರ್ಗವಾಗಿರುವುದನ್ನು ತಿಳಿದು ಹಲವರು ಉಪಾಧ್ಯಾಯರು ಮನೆಯ ಹತ್ತಿರ ಬರುತ್ತಾರೆ, ಅವರಿಗೆಲ್ಲ ಸಮಾಧಾನ ಹೇಳಿ ಕಳುಹಿಸಬೇಕಾಗು ಇದೆ, ಅದಕ್ಕೆ ಕೊನೆಮೊದಲೇ ಕಾಣುವುದಿಲ್ಲ–ಎಂದು ಸ್ವಲ್ಪ ಬೇಜಾರು ಪಟ್ಟುಕೊಂಡು ಹೊರಕ್ಕೆ ಬಂದನು. ಅಲ್ಲಿ ನಿಂತಿದ್ದ ಮೇಷ್ಟ್ರು ಮುನಿಸಾಮಿ ಕೈ ಮುಗಿದನು !

'ಏನು ಮೇಷ್ಟ್ರೇ ! ಬೆಳಗ್ಗೆ ಇಷ್ಟು ಹೊತ್ತಿಗೆಲ್ಲ ಬಂದಿದ್ದೀರಿ. ನನಗೆ ವರ್ಗವಾಗಿರುವ ಸಂಗತಿ ತಿಳಿದು ಬಂದಿದ್ದೀರಾ ?' ಎಂದು ರಂಗಣ್ಣ ಕೇಳಿದನು.

'ಹೌದು ಸಾರ್ ! ಎರಡು ಬಾರಿ ನಾನು ತಮ್ಮನ್ನು ಕಾಣಬೇಕೆಂದು ಬಂದಿದ್ದೆ. ತಮ್ಮ ಸವಾರಿ ಎಲ್ಲಿಗೋ ಹೋಗಿತ್ತು. ಈ ದಿನ ಹೇಗಾದರೂ ಮಾಡಿ ತಮ್ಮನ್ನು ನೋಡಿಯೇ ಹೋಗಬೇಕೆಂದು ಬೆಳಗ್ಗೆ ಬೇಗನೇ ಬಂದಿದ್ದೇನೆ. ತಮಗೆ ವರ್ಗವಾಗಿರುವುದನ್ನು ತಿಳಿದು ನಮಗೆಲ್ಲ ಬಹಳ ವ್ಯಸನ ಆಗಿದೆ ಸಾರ್ !'

'ವರ್ಗವಾದರೆ ವ್ಯಸನ ಏತಕ್ಕೆ ಮೇಷ್ಟ್ರೇ ? ಸರಕಾರಿ ನೌಕರಿಯಲ್ಲಿ ವರ್ಗಾವರ್ಗಿಗಳು ಆಗುತ್ತಲೇ ಇರುತ್ತವೆ.'

'ತಮ್ಮಂಥ ಧಣಿಗಳು ಮುಂದೆ ಬರೋದಿಲ್ಲ ಸಾರ್ !'

‛ಇನ್ನೂ ಒಳ್ಳೆಯವರು ಬರುತ್ತಾರೆ ಮೇಷ್ಟೇ ! ಆಲೋಚನೆ ಮಾಡಬೇಡಿ.'