ಪುಟ:ರಂಗಣ್ಣನ ಕನಸಿನ ದಿನಗಳು.pdf/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಿರ್ಗಮನ ಸಮಾರಂಭ

೩೧೯

ಮೇಲೆ ಒಂದು ಕಡೆ ನೆಲೆಯಾಗಿ ನಿಲ್ಲುತ್ತೇನೆ, ನಿನ್ನ ತಂದೆಗೆ ಸಹಾಯ ಮಾಡಿಕೊಂಡು ಇರುತ್ತೇನೆ ಎಂದು ಮುಂತಾಗಿ ಹೇಳಿದನಂತೆ. ಆ ಹುಡುಗಿ ಎಲ್ಲವನ್ನೂ ತಿಳಿಸಿದಳು. ಅಳಿಯನ ಮೇಲೆ ನಮಗೇನು ವೈರವೇ ಸ್ವಾಮಿ ? ಕರುಳು ಕೊಯ್ದು ಅವನಿಗೆ ಒಪ್ಪಿಸಿದ ಮೇಲೆ ಅವನ ಹಿತವನ್ನು ನಾವು ಬಯಸುವುದಿಲ್ಲವೇ ?

'ಬಹಳ ಸಂತೋಷ ವೆಂಕಟಸುಬ್ಬಯ್ಯ ! ?

'ಸ್ವಾಮಿಯವರು ಬೊಮ್ಮನ ಹಳ್ಳಿಗೆ ಒಪ್ಪೊತ್ತು ಬಂದಿದ್ದರೆ ಆಗಿತ್ತು.

'ಈಗ ವಿರಾಮವೇ ಇಲ್ಲ. ನಾಳೆಯೇ ಇಲ್ಲಿಂದ ಪ್ರಯಾಣ. ಮಿಡಲ್ ಸ್ಕೂಲ್ ಹೆಡ್ಮಾಸ್ಟ ರಿಗೆ ಚಾರ್ಜು ಕೊಟ್ಟು ಹೊರಟುಬಿಡುತ್ತೇನೆ. ಮುಖ್ಯವಾಗಿ ನಿಮ್ಮ ವಿಶ್ವಾಸ ದೊಡ್ಡದು ವೆಂಕಟಸುಬ್ಬಯ್ಯ ! :

ಬಳಿಕ ರಂಗಣ್ಣ ಎದುರಿಗಿದ್ದ ವೆಂಕಣ್ಣ ಮೇಷ್ಟರ ಕಡೆಗೆ ತಿರುಗಿಕೊಂಡು,

'ಏನು ಮೇಷ್ಟೆ ! ತಿಪ್ಪೇನಹಳ್ಳಿಯಿಂದ ಬೊಮ್ಮನಹಳ್ಳಿಗೆ ಬಂದದ್ದು ಅನುಕೂಲವಾಗಿದೆಯೇ ?' ಎಂದು ಕೇಳಿದನು.

'ಬಹಳ ಅನುಕೂಲವಾಗಿದೆ ಸ್ವಾಮಿ ! ಹೆಡ್ ಮೇಷ್ಟು ವೆಂಕಟಸುಬ್ಬಯ್ಯನವರ ಆಶ್ರಯದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. ಮನೆಯಲ್ಲಿ ನನ್ನ ಅಕ್ಕ ಇದ್ದಾಳೆ. ಮಕ್ಕಳ ಆರೈಕೆಯನ್ನು ಬಹಳ ಪ್ರೀತಿಯಿಂದ ಮಾಡುತ್ತಿದ್ದಾಳೆ. ಈಗ ನಿಶ್ಚಿಂತೆಯಾಗಿ ಸಂತೋಷದಿಂದ ಇದ್ದೇನೆ ಸ್ವಾಮಿ !

'ಈಗ ಎಲ್ಲವೂ ತಹಬಂದಿಗೆ ಬಂತಲ್ಲ ! ಮದುವೆ ಮಾಡಿ ಕೊಳ್ಳುವ ಏರ್ಪಾಡು ಏನು ? ?

'ಅಯ್ಯೋ ! ರಾಮ ರಾಮ ! ಆ ಮಾತನ್ನು ಆಡಬೇಡಿ ಸ್ವಾಮಿ ! ನಾನು ದೃಢ ಸಂಕಲ್ಪ ಮಾಡಿಬಿಟ್ಟಿದ್ದೇನೆ ! ಆಕೆಗೆ ನಾನು ವಂಚನೆ ಮಾಡೋದಿಲ್ಲ ! ನನ್ನ ಮಕ್ಕಳಿಗೆ ನಾನು ಮೋಸ ಮಾಡೋದಿಲ್ಲ !

'ಮತ್ತೆ ಸುಖಪಡಬೇಕು ಎಂಬುವ ಆಸೆ ಇಲ್ಲವೇ ಮೇಷ್ಟೆ ? :