ಪುಟ:ರಂಗಣ್ಣನ ಕನಸಿನ ದಿನಗಳು.pdf/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨೦

ರಂಗಣ್ಣನ ಕನಸಿನ ದಿನಗಳು

'ಸಂಸಾರ ಸುಖ ತೃಪ್ತಿ ಆಗೋಯ್ತು ಸ್ವಾಮಿ ಮತ್ತೆ ಅಲ್ಲಿ ಏನಿದೆ ಹೊಸದಾಗಿ ಸುಖಪಡೋದು ? ಬರೀ ಸ್ವಾರ್ಥಕ್ಕಾಗಿ ಮದುವೆ ಮಾಡಿಕೊಳ್ಳಬೇಕೇ ? ನನಗೆ ಬೇಡ ಸ್ವಾಮಿ ! ಇನ್ನೊಂದು ಹೆಂಡತಿ ಎಂದರೆ ಮೊದಲ ಹೆಂಡತಿಯ ಮಕ್ಕಳಿಗೆ ವನವಾಸ ತಲೆಗೆ ಕಟ್ಟಿದ್ದು ! ಸುರುಚಿ ಯಿಂದ ಐದು ವರ್ಷದ ಮಗು ಧ್ರುವನಿಗೆ ವನವಾಸವಾಯಿತು ! ಕೈಕೇಯಿಯಿಂದ ರಾಮ ಲಕ್ಷ್ಮಣರು ಕಾಡು ಪಾಲಾದರಲ್ಲ ! ಮಕ್ಕಳ ಹಿತಕ್ಕಾಗಿ ಸ್ವಾರ್ಥ, ಕಾಮ ಬಿಡಬೇಕು. ನಾನು ಬಿಟ್ಟು ಬಿಟ್ಟಿ ಸ್ವಾಮಿ ! ಈಗ ನನ್ನ ಮಕ್ಕಳನ್ನು ನೋಡುತ್ತಿದ್ದರೆ ನನಗೆ ಎಷ್ಟೋ ಸುಖ ! ಎಷ್ಟೋ ಸಂತೋಷ ! ಬಡತನದ ದುಃಖ ಕಾಣುವುದಿಲ್ಲ. ದೃಢಸಂಕಲ್ಪ ಮಾಡಿದ್ದೆ ನೆ ಸ್ವಾಮಿ !”

'ಮೇಷ್ಟೇ ! ನಿಮ್ಮ ವೀರವ್ರತವನ್ನು ಮೆಚ್ಚಿದೆ ! ಲೋಕದಲ್ಲಿ ನಿಮ್ಮಂಥವರು ಅತಿ ವಿರಳ ' ಎಂದು ಹೇಳುತ್ತಾ ರಂಗಣ್ಣನು ಎದ್ದು ಹೋಗಿ ಆ ಇಬ್ಬರು ಮೇಷ್ಟರಿಗೂ ಕಾಫಿ ತಂದುಕೊಟ್ಟನು. ಆದರೆ ಅವರು ಕಾಫಿ ತೆಗೆದುಕೊಳ್ಳಲಿಲ್ಲ, ' ನಾನು ದೇವತಾರ್ಚನೆ ಮಾಡದೆ ಏನನ್ನೂ ತೆಗೆದು ಕೊಳ್ಳುವುದಿಲ್ಲ ಸ್ವಾಮಿ ! ತಮಗೆ ತಿಳಿದಿದೆಯಲ್ಲ ' ಎಂದು ವೆಂಕಟ ಸುಬ್ಬಯ್ಯ ಹೇಳಿದನು. ' ನಾನು ಬಡವ ಸ್ವಾಮಿ ? ಕಾಫಿ ಅಭ್ಯಾಸ ಇಟ್ಟು ಕೊಂಡಿಲ್ಲ. ಈ ಕಾಫಿಯಿಂದ ಎಷ್ಟೋ ಸಂಸಾರಗಳು ಕಷ್ಟಕ್ಕೆ ಈಡಾಗಿವೆ. ಬರುವ ಸಂಪಾದನೆಯಲ್ಲಿ ಅರ್ಧವೆಲ್ಲ ಅದಕ್ಕೇನೆ ಖರ್ಚಾಗಿ ಹೋಗುತ್ತದೆ. ಕೆಲವರ ಮನೆಗಳಲ್ಲಿ ಹಾಲೂ ಮೊಸರಿಗೆ ಅಭಾವ ; ಕಾಫಿ ನೀರಿನ ಕುಡಿತ ಮಾತ್ರ ತಪ್ಪಿದ್ದಲ್ಲ ' ಎಂದು ಮೇಷ್ಟು ವೆಂಕಣ್ಣ ಹೇಳಿದನು,

'ಹಾಗಾದರೆ, ವೆಂಕಟಸುಬ್ಬಯ್ಯ ! ಇಲ್ಲೇ ಸ್ನಾನ ಮಾಡಿ, ಮಡಿ ಉಟ್ಟುಕೊಂಡು ನಮ್ಮ ಮನೆಯಲ್ಲೇ ದೇವತಾರ್ಚನೆ ಮಾಡಿ ; ಇಲ್ಲೇ ಊಟಮಾಡಿ. ವೆಂಕಣ್ಣ ! ನೀವೂ ಇಲ್ಲಿಯೇ ಊಟಕ್ಕೆ ನಿಲ್ಲಿ' ಎಂದು ರಂಗಣ್ಣ ಹೇಳಿದನು.

'ಆಗಬಹುದು ಸ್ವಾಮಿ ಎಂದು ಅವರು ಹೇಳಿದರು.

ಹೀಗೆ ಇಬ್ಬರು ಮೇಷ್ಟರುಗಳು ಊಟಕ್ಕೆ ಬರುತ್ತಾರೆಂಬ ಸಮಾಚಾರವನ್ನು ತಿಳಿಸುವುದಕ್ಕಾಗಿ ರಂಗಣ್ಣ ಆಡಿಗೆಯ ಮನೆಗೆ ಹೋದನು.