ಪುಟ:ರಂಗಣ್ಣನ ಕನಸಿನ ದಿನಗಳು.pdf/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨೨

ರಂಗಣ್ಣನ ಕನಸಿನ ದಿನಗಳು

ಗಿದಾಗ ಅಲ್ಲಿ ಉಪಾಧ್ಯಾಯರ ಸಂಘದ ಕಾರ್ಯದರ್ಶಿ ಕಾದಿದ್ದನು. ಅವನು ಕೈ ಮುಗಿದು, 'ಸಾಯಂಕಾಲ ಸಂಘದ ಸಭೆ ಇಟ್ಟು ಕೊಂಡಿದ್ದೆವೆ. ತಾವು ನಾಲ್ಕು ಗಂಟೆಗೆ ದಯಮಾಡಿಸಬೇಕು ಸ್ವಾಮಿ |' ಎಂದು ಅರಿಕೆ ಮಾಡಿದನು. ರಂಗಣ್ಣನಿಗೆ ತಾನು ಜನಾರ್ದನ ಪುರಕ್ಕೆ ಇನ್ ಸ್ಪೆಕ್ಟರಾಗಿ ಬಂದ ದಿವಸ ನಡೆದ ಸಭೆ ಜ್ಞಾಪಕಕ್ಕೆ ಬಂತು. ಆ ಆಗಮನದ ಸಮಾರಂಭವನ್ನೂ ಈ ನಿರ್ಗಮನದ ಸಮಾರಂಭವನ್ನೂ ಹೊಲಿಸಿಕೊಳ್ಳುತ್ತ ನನ್ನ ಇನ್‌ಸ್ಪೆಕ್ಟರ್‌ಗಿರಿಯ ದಿನಗಳೆಲ್ಲ ಕನಸಿನ ದಿನಗಳಾದುವು ! ಎಷ್ಟು ಬೇಗ ಕಾಲಚಕ್ರ ಉರುಳಿಹೋಯಿತು ! ಎಂದು ಮನಸ್ಸಿನಲ್ಲಿ ಹೇಳಿ ಕೊಂಡು, 'ಆಗಲಿ ಮೇಷ್ಟೇ ! ಬರುತ್ತೇನೆ, ಸ್ವಲ್ಪ ಕಾಫಿ ತೆಗೆದುಕೊಂಡು ಹೊರಡಿ ” ಎಂದು ಹೇಳಿ ಉಪಚಾರಮಾಡಿ ಕಳಿಸಿದನು.

ಅನಂತರ ವೆಂಕಟಸುಬ್ಬಯ್ಯ ಸ್ನಾನಮಾಡಿ ಮಡಿಯುಟ್ಟು ಕೊಂಡು ದೇವತಾರ್ಚನೆ ಮಾಡಿದನು. ವೆಂಕಣ್ಣ ಸ್ನಾನಮಾಡಿ ಮಡಿಯುಟ್ಟುಕೊಂಡು ಸಂಧ್ಯಾವಂದನೆಯನ್ನು ಮಾಡಿದನು. ಊಟವಾಯಿತು. ಮಧ್ಯಾಹ್ನ ಸ್ವಲ್ಪ ವಿಶ್ರಾಂತಿಯೂ ಆಯಿತು, ರಂಗಣ್ಣ ಮೂರು ಗಂಟೆಗೆ ಎದ್ದು ಸಂಘದ ಸಭೆಗೆ ಹೊರಡಲು ಸಿದ್ಧ ಮಾಡಿ ಕೊಳ್ಳುತ್ತಿದ್ದನು. ತಾನು ಜನಾರ್ದನಪುರಕ್ಕೆ ಬಂದ ದಿನ ಜಂಬದ ಕೋಳಿಯಾಗಿ ಹಾಕಿಕೊಂಡಿದ್ದ ಸರ್ಜು ಸೂಟು, ದೊಡ್ಡ ಸರಿಗೆಯ ರುಮಾಲು ಮತ್ತು ಕೈ ಬೆತ್ತಗಳ ಸಜ್ಜು ಮಾಡಿಕೊಂಡು ಅತಿಥಿಗಳಾಗಿ ಬಂದಿದ್ದ ಆ ಇಬ್ಬರು ಮೇಷ್ಟರುಗಳನ್ನು ಜೊತೆಗೆ ಕರೆದುಕೊಂಡು ಸಭೆಗೆ ಹೊರಟನು.

ಮಿಡಲ್ ಸ್ಕೂಲಿನ ಕಟ್ಟಡದಲ್ಲಿ ಸಭೆಯನ್ನು ಏರ್ಪಾಟು ಮಾಡಿದ್ದರು. ಅದನ್ನು ಸಮೀಪಿಸುತ್ತಿದ್ದಾಗ ಮೇಷ್ಟ್ರು ಕೆಂಚಪ್ಪ ಎದುರಿಗೆ ಬಂದು ನಮಸ್ಕಾರ ಮಾಡಿದನು. 'ಏನು ಮೇಷ್ಟೆ! ಆರೋಗ್ಯವಾಗಿದ್ದೀರಾ ?' ಎಂದು ರಂಗಣ್ಣ ಕೇಳಿದನು.

'ಇದ್ದೇನೆ ಸ್ವಾಮಿ !”

ರ೦ಗಣ್ಣನ ದೃಷ್ಟಿ ಆ ಮೇಷ್ಟರ ರುಮಾಲಿನ ಕಡೆಗೆ ಹೋಯಿತು. ಹಿಂದೆ ನಡೆದಿದ್ದ ಪ್ರಕರಣವೆಲ್ಲ ಜ್ಞಾಪಕಕ್ಕೆ ಬಂದು ನಗು ಬಂತು.