ಪುಟ:ರಂಗಣ್ಣನ ಕನಸಿನ ದಿನಗಳು.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜಂಬದ ಕೋಳಿ

೧೯

ಇದೆಲ್ಲ ನಡೆದು ಒಂದು ವಾರವಾಯಿತು. ಕಚೇರಿಯ ಕೆಲಸದ ಮರ್ಮಗಳನ್ನೆಲ್ಲ ರಂಗಣ್ಣ ತಿಳಿದುಕೊಳ್ಳಲು ಪ್ರಯತ್ನ ಪಟ್ಟನು. ತನ್ನ ರೇ೦ಜಿನ ವ್ಯಾಪ್ತಿಯನ್ನು ನಕ್ಷೆಯನ್ನಿಟ್ಟು ಕೊಂಡು ನೋಡಿದನು. ಹಳ್ಳಿಗಳ ಕಡೆ ಸರ್ಕೀಟು ಹೋಗಬೇಕೆಂದು ಅವನಿಗೆ ಆಶೆ ಬಹಳವಾಗಿತ್ತು, ಸರ್ಕೀಟು ಹೋದರೆ ಊಟಕ್ಕೆ ಏನು ಮಾಡಬೇಕು? ಅಡಿಗೆ ಮಾಡುವವರು ಯಾರು ? ಗುಮಾಸ್ತ ಶಂಕರಪ್ಪನನ್ನು ಕರೆದು: ಸರ್ಕೀಟಿನ ವಿವರಗಳನ್ನು ಕೇಳಿ ತಿಳಿದುಕೊಂಡನು. ಹಿಂದಿನ ಇನ್ ಸ್ಪೆಕ್ಟರು ಒಂದೊಂದು ದಿನ ಬೆಳಗ್ಗೆ ಹೋಗಿ ಸಾಯಂಕಾಲಕ್ಕೆ ಹಿಂದಿರುಗುತ್ತಿದ್ದರು ; ಒಂದೊಂದು ಸಂದರ್ಭದಲ್ಲಿ ಮೇಷ್ಟರುಗಳ ಮನೆಗಳಲ್ಲಿ ಊಟ ಮಾಡುತ್ತಿದ್ದರು; ಒಂದೊಂದು ಸಂದರ್ಭದಲ್ಲಿ ಯಾರಾದರೂ ಗ್ರಾಂಟ್ ಸ್ಕೂಲು ಮೇಷ್ಟರು ಸಮೀಪದಲ್ಲಿದ್ದರೆ ಅವರಿಂದ ಅಡಿಗೆ ಮಾಡಿಸುತ್ತಿದ್ದರು,- ಹೀಗೆ ಸಂದರ್ಭ ನೋಡಿಕೊಂಡು ಮಾಡುತ್ತಿದ್ದರು ಎಂದು ಅವನು ಹೇಳಿದನು. ಶಂಕರಪ್ಪ ಸ್ವಲ್ಪ ಹಳಬ, ಲೌಕಿಕ ತಿಳಿದವನು. 'ಸ್ವಾಮಿಯವರಿಗೆ ಹಿಂದಿನವರ ಪದ್ಧತಿ ಸರಿಬೀಳುವುದಿಲ್ಲ. ತಾವು ಶ್ರೀಮಂತರು, ತಮ್ಮ ಗೌರವಕ್ಕೆ ತಕ್ಕ ಹಾಗೆ ನಡೆದುಕೊಳ್ಳುತ್ತೀರಿ. ತಮ್ಮ ಹಾಗೆ ಇಲ್ಲಿಯ ಅಮಲ್ದಾರರೇ ಉಡುಪು ಧರಿಸುವುದಿಲ್ಲ, ಇನ್ನು ತಾವು ಆಡಿಗೆಯವನಿಲ್ಲದೆ ಸರ್ಕೀಟು ಹೋಗುವುದಿಲ್ಲ ಎಂಬುದನ್ನು ಯಾರಾದರೂ ಹೇಳಬಲ್ಲರು. ಹಿಂದಿನವರ ಕಾಲದಲ್ಲೆಲ್ಲ ಇಲಾಖೆಯ ಗೌರವವನ್ನು ಕಾಪಾಡಿಕೊಂಡು ಬರಲಿಲ್ಲ. ತಮ್ಮ ಕಾಲದಲ್ಲಿ ಆ ಗೌರವವನ್ನು ಎತ್ತಿ ಹಿಡಿಯಬೇಕು ' ಎಂದು ಹೇಳಿದನು,

ರಂಗಣ್ಣನಿಗೆ ಆ ಸ್ತೋತ್ರ ಶ್ರವಣದಿಂದ ಸಂತೋಷವಾಯಿತು, 'ಶಂಕರಪ್ಪ ! ಇಲ್ಲಿ ಅಡಿಗೆಯವರು ಸಿಕ್ಕುತ್ತಾರೆಯೇ ? ಏನು ಸಂಬಳ ಕೊಡ ಬೇಕಾದೀತು ?' ಎಂದು ಕೇಳಿದನು.

'ಸ್ವಾಮಿ, ವಿಚಾರಿಸಿದರೆ ಸಿಕ್ಕ ಬಹುದು. ಯಾರಾದರೂ ಹೋಟೆಲ್ ಮಾಣಿಗಳನ್ನು ಕೇಳಬೇಕು, ಹದಿನೈದು ರೂಪಾಯಿಗಳನ್ನಾದರೂ ಸಂಬಳ ಕೇಳಬಹುದು. ಆದರೆ ಅಷ್ಟೆಲ್ಲ ಖರ್ಚು ಅನಾವಶ್ಯಕ ಸ್ವಾಮಿ ಈಗ ನಮ್ಮ ಕಚೇರಿಯಲ್ಲಿ ಒಬ್ಬ ಜವಾನನ ಕೆಲಸ ಖಾಲಿಯಿದೆ. ತಿಂಗಳಿಗೆ