ಪುಟ:ರಂಗಣ್ಣನ ಕನಸಿನ ದಿನಗಳು.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೪.

ಕಂಬದಹಳ್ಳಿಗೆ ಭೇಟಿ

ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು. ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್ ಸೂಟು ಬೇಡವೆಂದು ಬದಿಗೊತ್ತಿ ಚೆಕ್ ಸೂಟನ್ನು ಧರಿಸಿಕೊಂಡನು. ಅದನ್ನು ಹೊಸದಾಗಿ ಹೋಲಿಸಿದ್ದುದರಿಂದ ಇಸ್ತ್ರಿ ಮಾಡಿದ್ದು ಮಾಡಿಟ್ಟ ಹಾಗೆಯೇ ಇದ್ದಿತು ; ಮತ್ತು ಚೆನ್ನಾಗಿಯೂ ಇದ್ದಿತು. ಜವಾನನು ಬೂಟ್ಸುಗಳಿಗೆ ಪಾಲಿಷ್ ಕೊಟ್ಟು ಮೆರಗು ಬರುವಂತೆ ಮಾಡಿಟ್ಟಿದ್ದನು. ಕಾಲರು, ನೆಕ್ ಟೈ, ಮೊದಲಾದ ಪಾಶ್ಚಾತ್ಯ ರೀತಿಯ ಉಡುಪಿನ ಸಜ್ಜು ರಂಗಣ್ಣನಿಗೆ ಪ್ರಿಯವಾಗಿದ್ದುವು. ಅವುಗಳನ್ನೆಲ್ಲ ಧರಿಸಿಕೊಂಡು ದೊಡ್ಡ ಕನ್ನಡಿಯಲ್ಲಿ ತನ್ನ ಅಂದ ಚೆಂದಗಳನ್ನು ನೋಡಿಕೊಳ್ಳುತಿದ್ದಾಗ ಹೊಗೆಯಾಡುತ್ತಿದ್ದ ಉಪ್ಪಿಟ್ಟು, ಕಾಫಿ ಮೇಜಿನ ಮೇಲೆ ಬಂದು ಕುಳಿತುವು. ರಂಗಣ್ಣನ ಹೆಂಡತಿ ಸ್ವತಃ ಸಿದ್ಧ ಮಾಡಿ ತಂದಿಟ್ಟ ಉಪಾಹಾರ, ಅವುಗಳನ್ನೆಲ್ಲ ಸ್ವೀಕರಿಸಿ ಬೆಳಗ್ಗೆ ಏಳು ಗಂಟೆಗೆ ಸರಿಯಾಗಿ ರಂಗಣ್ಣ ಮನೆ ಬಿಟ್ಟು ಹೊರಟನು. ಏಳೂವರೆ ಗಂಟೆಗೆ ಪಾಠಶಾಲೆ ಪ್ರಾರಂಭವಾಗುತ್ತದೆ. ಅರ್ಧ ಗಂಟೆಯಲ್ಲಿ ನಾಲ್ಕು ಮೈಲಿ ದೂರದ ಕಂಬದಹಳ್ಳಿಗೆ ಬೈ ಸ್ಕಲ್ ಮೇಲೆ ಹೋಗಬಹುದು ; ಅದರಲ್ಲೂ ಹೊಸಾ ಬಿ. ಎಸ್. ವಿ. ಬೈಸ್ಕಲ್ಲುಎಂದುಕೊಂಡು ಹೊರಟನು.

ದೊಡ್ಡ ರಸ್ತೆ ಚೆನ್ನಾಗಿತ್ತು, ಅರ್ಧಮೈಲಿ ದೂರ ಹೋದಮೇಲೆ ಬಲಕ್ಕೆ ಬೇರೆ ರಸ್ತೆ ಸಿಕ್ಕಿತು. ಆ ಡಿಸ್ಟ್ರಿಕ್ಟ್ ಬೋರ್ಡ್ ರಸ್ತೆಯಲ್ಲಿ ಮುಂದೆಹೋಗಬೇಕಾಗಿತ್ತು. ಆ ಸೀಳು ರಸ್ತೆಯಲ್ಲಿ ನಾಲ್ಕು ಫರ್ಲಾಂಗು ಹೋದನೋ ಇಲ್ಲವೋ ರಸ್ತೆ ಏಕೊ ಆವ್ಯವಸ್ಥೆಯಲ್ಲಿದ್ದ ಹಾಗೆ ಕಂಡಿತು, ಸಾಲದ್ದಕ್ಕೆ ಹಿಂದಿನ ರಾತ್ರಿ ಸ್ವಲ್ಪ ಮಳೆಯೂ ಬಿದ್ದಿತ್ತು, ಬೆಂಗಳೂರು