ಪುಟ:ರಂಗಣ್ಣನ ಕನಸಿನ ದಿನಗಳು.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬

ರಂಗಣ್ಣನ ಕನಸಿನ ದಿನಗಳು

ಮೋಸವಾಯಿತು. ಶಂಕರಪ್ಪ ನನ್ನಾದರೂ ಕೇಳಿದ್ದಿದ್ದರೆ ಚೆನ್ನಾಗಿರುತಿತ್ತು. ಈಗ ಷರಾಯಿಯಲ್ಲಿ ಅರ್ಧದ ಮೇಲೆ ನೆನೆದುಹೋಯಿತಲ್ಲ. ಒಳಗಿನ ಚಡ್ಡಿ ಸಹ ಕೊನೆಗಳಲ್ಲಿ ನೆನೆದು ಹೋಗಿದೆ. ಕಾಲುಗಳೆಲ್ಲ ತಣ್ಣಗಾಗಿ ಕೊರೆಯುತ್ತಿವೆ'- ಎಂದು ಹೇಳಿಕೊಂಡನು. ಇನ್‌ಸ್ಪೆಕ್ಟರ್ ಗಿರಿಯ ಉತ್ಸಾಹ ಸಹ ಅರ್ಧ ತಣ್ಣಗಾಯಿತು.

ಪುನಃ ಬೂಟ್ಟುಗಳನ್ನು ಕಟ್ಟಿಕೊಂಡು ಒದ್ದೆ ಷರಾಯಿಗಳಲ್ಲಿಯೇ ಬೈಸ್ಕಲ್ಲನ್ನು ಏರಿಕೊಂಡು ಮುಂದಕ್ಕೆ ಹೊರಟನು. ದಾರಿಯಲ್ಲಿ ಎದುರು ಬಿದ್ದ ಗಂಡಸರಲ್ಲಿ, ' ಅಯ್ಯೋ ಪಾಪ ! ಅಯ್ನೋರು ನೆನೆದುಹೋದರು ಎಂದವನೊಬ್ಬ; ' ಅಯ್ನೋರಲ್ಲ ಕಣೋ! ಯಾರೋ ಸಾಹೇಬ್ರು. ಠೀಕಾಗವ್ರೆ' ಎಂದವನು ಮತ್ತೊಬ್ಬ, ಆ ಮಾತುಗಳನ್ನು ಅರ್ಧಂಬರ್ಧ ಆಲಿಸಿ ತನ್ನ ಅವಸ್ಥೆಗೆ ಒಳಗೊಳಗೇ ನಗುತ್ತ ಇನ್ನೆರಡು ಮೈಲಿ ದೂರ ಹೋಗುತ್ತಲೂ ದೂರದಲ್ಲಿ ಹಳ್ಳಿ ಇರುವುದು ಗೋಚರವಾಯಿತು. ಬಹುಶಃ ಅದೇ ಕಂಬದಹಳ್ಳಿ ಇರಬೇಕೆಂದು ತೀರ್ಮಾನಿಸಿಕೊಂಡನು. ಇನ್ನು ಸ್ವಲ್ಪ ದೂರ ಮುಂದಕ್ಕೆ ಬರುತ್ತಲೂ ಕಂಬದಹಳ್ಳಿಯ ಭಾರಿ ಕೆರೆ ದೊಡ್ಡ ಕನ್ನಡಿಯ ಹಾಗೆ ಕಣ್ಣಿಗೆ ಬಿತ್ತು. ಅದನ್ನು ನೋಡಿದಾಗ ಆ ಪ್ರಕೃತಿಯ ಸೌಂದರ್ಯಕ್ಕೆ ಸ೦ತೊಷವೂ ಹಿಂದಿನ ನೀರ ಹರವುಗಳ ಜ್ಞಾಪಕದಿಂದ ಮುಂದೇನು ದೊಡ್ಡ ವಿಘ್ನವಿದೆಯೋ ಎಂಬ ಭಯವೂ ಏಕಕಾಲದಲ್ಲಿ ರಂಣ್ಣನಿಗೆ ಉಂಟಾದುವು. ಇಷ್ಟು ದೂರ ಬಂದದ್ದ೦ತೂ ಆಯಿತು; ಹಳ್ಳಿ ಸಹ ಕಾಣುತ್ತಾ ಇದೆ ; ಇನ್ನೆಲ್ಲ ಅರ್ಧ ಮೈಲಿ, ಏನು ವಿಘ್ನವಿದ್ದರೂ ದಾಟುವುದೇ ಸರಿ ಎಂದು ನಿಶ್ಚಯ ಮಾಡಿಕೊಂಡು ಮುಂದಕ್ಕೆ ಹೊರಟನು, ಕೆರೆಯ ಕೋಡಿ ಬಳಿ ಬಂದಾಗ ರಸ್ತೆ ಬಹಳ ಇಳಿಜಾರಾಗಿದ್ದುದು ಕಂಡಿತು. ತಾನಿರುವ ಮಟ್ಟಕ್ಕೂ ಕೆಳಗಿನ ಮಟ್ಟಕ್ಕೂ ಇಪ್ಪತ್ತು ಅಡಿಗಳಮೇಲೆ ಹಳ್ಳ ಏರುವುದಾಗಿ ಕಂಡಿತು. ಅಷ್ಟೇ ಅಲ್ಲ, ಕೆರೆ ಕೋಡಿ ಬಿದ್ದು ನೀರು ರಸ್ತೆಗೆ ಅಡ್ಡಲಾಗಿ ಹರಿಯುತ್ತಿರುವುದು ಕಂಡಿತು. ಹಳ್ಳಿಯ ಹೆಂಗಸರು ಮೇಲುಗಡೆ, ಆಚೆಯ ದಂಡೆಯಲ್ಲಿ ಪಾತ್ರೆಗಳನ್ನು ಬೆಳಗುತ್ತಿರುವುದು, ಸೀರೆಗಳನ್ನು ಒಗೆಯುತ್ತಿರುವುದು, ಕೊಡಗಳಲ್ಲಿ ನೀರು ತುಂಬಿಕೊಳ್ಳುತ್ತಿರುವುದು - ಮೊದಲಾದುವೆಲ್ಲ ಕ೦ಡಿತು. ರಂಗಣ್ಣ