ಪುಟ:ರಂಗಣ್ಣನ ಕನಸಿನ ದಿನಗಳು.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮

ರಂಗಣ್ಣನ ಕನಸಿನ ದಿನಗಳು

ಜೀವ ನೆನೆದರೆ ನೆನೆಯಲಿ. ಈಸಬೇಕು, ನುಗ್ಗಿ ಜೈ ಸಬೇಕು' ಎಂದು ಹುರುಪುಗೊಂಡು ಬೂಟ್ಸುಗಳನ್ನು ಬಿಚ್ಚಿದನು. ಆಗ ಹಳೆಯ ಇನ್ ಸ್ಪೆಕ್ಟರಿನ ಸಾಮಾನ್ಯ ಪಂಜೆಯ ನೆನಪಾಯಿತು ! ಆತನಂತೆಯೇ ತಾನೂ ಸಹ ಇದ್ದಿದ್ದರೆ ಆಗಿತ್ತಲ್ಲ ಎಂದು ವಿವೇಕೋದಯವಾಯಿತು. ಇವೆಲ್ಲ ಅನುಭವಕ್ಕೆ ಬರುವುದು ಒಳ್ಳೆಯದು. ಎಂದು ಹೇಳಿಕೊಳ್ಳುತ್ತ ಷರಾಯಿಯನ್ನೂ ಅಂಗಿಯನ್ನೂ ತೆಗೆದು ಬಿಟ್ಟು ಬರಿ ಚೆಡ್ಡಿಯಲ್ಲಿ ನಿಂತು ಕೊಂಡನು. ಎಲ್ಲವನ್ನೂ ಗಂಟು ಕಟ್ಟಿ ಕೊರಳಿಗೆ ಸುತ್ತಿಕೊಂಡು ಬೂಟ್ಸುಗಳನ್ನು ಎಡಗೈಯಲ್ಲಿ ಹಿಡಿದೆತ್ತಿಕೊ೦ಡು ಬಲಗೈಯಿಂದ ಬೈ ಸ್ಕಲ್ಲನ್ನು ತಳ್ಳಿಕೊಂಡು ನೀರಿನೊಳಕ್ಕೆ ರಂಗಣ್ಣ ಇಳಿದನು. ಆಗಿನ ಅವನ ವಿಚಿತ್ರವೇಷವನ್ನು ಅವನ ಹೆಂಡತಿ ನೋಡಬೇಕಾಗಿತ್ತು ! ನೀರಿನಲ್ಲಿ ಇಳಿದು ಅರ್ಧಕ್ಕೆ ಬಂದಾಗ ಸೆಳೆವು ಹೆಚ್ಚಾಗಿದ್ದಂತೆ ತೋರಿತು ; ಕಾಲುಗಳು ಅಸ್ಥಿರವಾದುವು. ಆದರೆ ಹೇಗೋ ದೇವರು ಪಾರು ಮಾಡಿಸಿದನು. ರಂಗಣ್ಣ ನೀರನ್ನು ದಾಟಿಕೊಂಡು ಆಚೆಯ ದಡವನ್ನು ಸೇರಿ ರಸ್ತೆಯನ್ನು ಹತ್ತಿ ನೆಲಕ್ಕೆ ಬಂದನು ಬೈಸ್ಕಲ್ಲನ್ನು ಮರಕ್ಕೆ ಒರಗಿಸಿ ಅಲ್ಲಿನ ಕಲ್ಲಿನ ಮೇಲೆಕುಳಿತು ಕೊಂಡನು. ತನ್ನ ಚೆಡ್ಡಿ ಯೆಲ್ಲ ಒದ್ದೆಯಾಗಿದ್ದಿತು ; ನೀರುತೊಟ್ಟಿಕ್ಕುತ್ತಿತ್ತು. ಹಿಂದೆ ಅರ್ಧದ ವರೆಗೆ ನೆನೆದಿದ್ದ ಷರಾಯಿ ಈಗ ಏಕ ಮಾತ್ರ ಆಧಾರ. ಏನು ಮಾಡುವುದು ? ಚೆಡ್ಡಿಯನ್ನು ತೆಗೆದು ಉಪಾಯದಿಂದ ಷರಾಯಿಯನ್ನು ಹಾಕಿಕೊಳ್ಳ ಬೇಕು ಆದರೆ ಪಂಚೆಯನ್ನು ಬಿಚ್ಚಿ ಕಳಚುವಂತೆ ಚೆಡ್ಡಿಯನ್ನು ಕಳಚಲಾದೀತೆ ? ಈ ಸಂಕಟವನ್ನು ಅನುಭವಿಸಿದವರಿಗೆ ಅದರ ಆಗು ಹೋಗುಗಳು ಗೊತ್ತು. ಉಳಿದವರಿಗೆ ಹೇಗೆ ಗೊತ್ತಾಗಬೇಕು? ಚೆಡ್ಡಿ ಅದನ್ನು ಬಿಚ್ಚಿ ಬಿಟ್ಟು, ಗೊಮ್ಮಟೇಶ್ವರನಂತೆ ನಿಂತು ಷರಾಯಿಯನ್ನು ಹಾಕಿಕೊಳ್ಳುವುದಾದರೂ ಹೇಗೆ ? ಜನ ಓಡಾಡುತ್ತಾ ಇದ್ದಾರೆ. ಒದ್ದೆಯ ಚೆಡ್ಡಿ ಯ ಮೇಲೆಯೇ ಷರಾಯಿಯನ್ನು ಎಳೆದುಕೊ೦ಡು ಹಾಕಿಕೊಳ್ಳುವುದೇ ? ಅದರ ಸಂಪರ್ಕದಿಂದ ಷರಾಯಿಯ ಆ೦ಡಿನ ಭಾಗವೆಲ್ಲ ಒದ್ದೆಯೇ ಆಗುತ್ತದೆಯಲ್ಲ ! ಅದನ್ನು ತಪ್ಪಿಸುವುದು ಹೇಗೆ ? ಹಾಗೆಯೇ ಪಾಠಶಾಲೆಗೆ ಹೋದರೆ ತನ್ನನ್ನು ನೋಡಿ ಹುಡುಗರು ನಗುವುದಿಲ್ಲವೆ ? ಮೇಷ್ಟು ಏನೆಂದುಕೊಂಡಾನು ?