ಪುಟ:ರಂಗಣ್ಣನ ಕನಸಿನ ದಿನಗಳು.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಂಬದಹಳ್ಳಿಗೆ ಭೇಟಿ

೨೯

ಎಲ್ಲರ ಹತ್ತಿರವೂ ಹೇಳಿ ಹೇಳಿ ಅಪಹಾಸ್ಯ ಮಾಡುವುದಿಲ್ಲವೆ ? ಹೀಗೆ ಭಾವನಾತರಂಗಗಳಲ್ಲಿ ಮುಳುಗುತ್ತ ಏಳುತ್ತ ಸಮಸ್ಯೆ ಬಗೆಹರಿಯದೆ ರಂಗಣ್ಣ ಕಲ್ಲ ಮೇಲೆಯೇ ಕೊಂಚ ಹೊತ್ತು ಒದ್ದೆ ಯಿಂದ ನಡುಗುತ್ತ ಕುಳಿತಿದ್ದನು. ಕಡೆಗೆ ಸಮಸ್ಯೆ ಪರಿಹಾರವಾಯಿತು. ರಂಗಣ್ಣ ತನ್ನ ಅಂಗಿಯನ್ನು ನಡುವಿಗೆ ಸುತ್ತಿ ಚೆಡ್ಡಿಯನ್ನು ಬಿಚ್ಚಿ , ಬರಿಯ ಷರಾಯಿಯನ್ನು ಹಾಕಿ ಕೊಂಡು ಜಯಶಾಲಿಯಾದನು. ' ಇಷ್ಟೊಂದು ಸುಲಭೋಪಾಯ ಮೊದಲೇ ಹೊಳೆಯಲಿಲ್ಲವಲ್ಲ !' ಎಂದು ತನ್ನ ಮಂದಬುದ್ಧಿಯನ್ನು ತಾನೇ ಹಳಿದುಕೊಂಡು ಮತ್ತೆ ಉಡುಪನ್ನು ಧರಿಸಿ, ಬೂಟ್ಸು ಹಾಕಿಕೊಂಡು ಹಳ್ಳಿಯ ಕಡೆಗೆ ಹೊರಟನು. ಗಡಿಯಾರವನ್ನು ನೋಡಿದರೆ ಆಗಲೇ ಒ೦ಬತ್ತು ಗಂಟೆ ಆಗಿಹೋಗಿತ್ತು.

ಹೀಗೆ ರಂಗಣ್ಣ ಸ್ವಲ್ಪ ಮಟ್ಟಿಗೆ ಭಂಗ ಪಟ್ಟದ್ದರಿಂದ ಇನ್ ಸ್ಪೆಕ್ಟರ ಲಸ ಹೂವಿನ ಹಾಸಿಗೆ ಅಲ್ಲವೆಂದೂ ಒಳನಾಡಿನಲ್ಲಿ ಸರ್ಕೀಟು ತಿರುಗುವುದು ಕಷ್ಟದ ಕೆಲಸವೆಂದೂ ಅರಿವಾಯಿತು. ಈಗ ಹೇಗೋ ದಾರಿಯಲ್ಲಿನ ನೀರಿನ ಹರವುಗಳನ್ನು ದಾಟಿ ಬಟ್ಟೆಗಳನ್ನು ತೊಯ್ಸಿಕೊಂಡು ಹಳ್ಳಿಯನ್ನು ಸೇರಿದ್ದಾಯಿತು. ಸ್ಕೂಲುಗಳನ್ನು ನೋಡಿದ ಮೇಲೆ ಜನಾರ್ದನ ಪುರವನ್ನು ಸೇರುವುದು ಹೇಗೆ ? ಪುನಃ ಫಜೀತಿಗೆ ಸಿಕ್ಕಿಕೊಳ್ಳ ಬೇಕಲ್ಲ. ಅದಕ್ಕೆನು ಪರಿಹಾರ ? ಎಂದು ಆಲೋಚಿಸಿದನು. ಮೇಷ್ಟರ ಸಹಾಯದಿಂದ ಹಿಂದಿರುಗುವುದಕ್ಕೆ ಬೇರೆದಾರಿಯನ್ನು ತಿಳಿದುಕೊಳ್ಳುವುದೋ ಇಲ್ಲದಿದ್ದರೆ ಒಂದು ಗಾಡಿಯನ್ನು ಗೊತ್ತುಮಾಡಿಕೊ೦ಡು ಬೈಸ್ಕಲ್ಲನ್ನು ಮೇಲೆ ಕಟ್ಟಿ ತಾನು ಒಳಗೆ ಕುಳಿತು ಕ್ಷೇಮವಾಗಿ ಹಿಂದಿರುಗುವುದೋ- ಈ ಎರಡರಲ್ಲಿ ಏನನ್ನಾದರೂ ಮಾಡೋಣವೆಂದು ನಿರ್ಧರಿಸಿಕೊಂಡನು, ಹಳ್ಳಿಯನ್ನು ಪ್ರವೇಶಿಸಿ ಅದರ ಇಕ್ಕಟ್ಟಾದ ಕೊಳಕು ಓಣಿಗಳಲ್ಲಿ ಹೋಗುತ್ತಿದ್ದಾಗ ರಂಗಣ್ಣನಿಗೆ ಬಹಳ ಅಸಹ್ಯವಾಯಿತು. ಇತ್ತ ಅತ್ತ ಹೇಸಿಗೆ ; ಬಚ್ಚಲ ನೀರೆಲ್ಲ ದಾರಿಯಲ್ಲೇ ; ಮೂಳೆ ಬಿಟ್ಟುಕೊಂಡು ನಿಂತಿದ್ದ ಕೆಲವು ರಾಸುಗಳು ; ತನ್ನನ್ನು ನೋಡಿ ಬಗುಳುತ್ತ ಓಡಿ ಹೋಗುತಿದ್ದ ನಾಯಿಗಳು ; ಸಗಣಿಯನ್ನು ಬೆರಣಿ ತಟ್ಟುತ್ತಿದ್ದ ಹೆಂಗಸರು ; ಕೆಲವು ಮನೆಗಳ ದಿಣ್ಣೆಗಳ ಮೇಲೆ ಕಂಬಳಿ ಹೊದ್ದು ಕೊಂಡು ಕೆಮ್ಮುತ್ತ