ಪುಟ:ರಂಗಣ್ಣನ ಕನಸಿನ ದಿನಗಳು.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಂಬದಹಳ್ಳಿಗೆ ಭೇಟಿ

೩೩

ನಾಗೇನಹಳ್ಳೀಲೇ ಅವ್ರೆ, ಅಲ್ಲೇ ಇಸ್ಕೋಲ್ ಕೊಟ್ರೆ ಅಲ್ಲೇ ಪಾಟ ಮಾಡೋಕೆ ಅವರ್ಗೂ ಅನ್ಕೂಲ.'

'ಒಳ್ಳೆಯದಪ್ಪ, ಆಗಲಿ ನೋಡೋಣ. ನಾನು ಇಲ್ಲಿಗೆ ಹೊಸದಾಗಿ ಬಂದಿದ್ದೇನೆ. ನಿಮ್ಮ ಹಳ್ಳಿಯ ಸ್ಥಿತಿ ನೋಡಿದಮೇಲೆ ಏನಾದರೂ ಮಾಡೋಣ.'

'ನಮ್ಮಳ್ಳಿ ದೊಡ್ಡದು ಸೋಮಿ ! ಬಾಳ ಮನೆಗಳಿವೆ. ನನ್ಗೆ ಲೆಕ್ಕ ಬರಾಕಿಲ್ಲ. ನೂರ ಮನೆ ಆದರೂ ಇರಬೋದೋ ಏನೋ. ಓದೋ ಹೈಕ್ಳು ಬಾಳ ಅವ್ರೆ.'

'ಆಗಲಪ್ಪ, ನಾನು ಬಂದು ನೋಡುತ್ತೇನೆ. ನಿಮ್ಮ ಮಕ್ಕಳಿಗೆಲ್ಲ ವಿದ್ಯೆ ಹೇಳಿಕೊಡುವುದಕ್ಕೇನೆ ನಮ್ಮ ಇಲಾಖೆ ಇರುವುದು.'

'ನಿಮ್ಮ ಮಕ್ಕಳೆಷ್ಟು ಸೋಮಿ ?'

'ಇಬ್ಬರು ಗಂಡು, ಇಬ್ಬರು ಹೆಣ್ಣು, ನಾಲ್ಕು ಮಕ್ಕಳಿದ್ದಾರೆ.'

'ಪುಣ್ಯವಂತರು ಸೋಮಿ! ಕೈತುಂಬ ಸಂಬಳ ಬರ್ತೈತೆ, ಮಕ್ಕಳು ಮರಿ ಅವ್ರೆ, ನಮ್ಕೇನೈತೆ ? ಒಪ್ಪೊತ್ತು ಹಿಟ್ಟು. ದೇವು ಅಂಗೇನೇ ನಡೆಸಿಕೊಂಡ್ ಬರ್ತಾನೆ.”

ಹೀಗೆಲ್ಲ ಮಾತುಗಳನ್ನಾಡುತ್ತ ನೀರಿನ ಹರವುಗಳನ್ನು ದಾಟಿದ ಮೇಲೆ ರಂಗಣ್ಣನಿಗೆ ಆ ಬೋಳ ಗಾಡಿಯಲ್ಲಿ ಊರೊಳಗೆ ಹೋಗುವುದಕ್ಕೆ ಮನಸ್ಸು ಒಪ್ಪಲಿಲ್ಲ. ಗಾಡಿಯಿಂದ ಇಳಿದು, 'ಮುಂದಕ್ಕೆ ರಸ್ತೆ ಸರಿಯಾಗಿದೆ. ಬೈಸ್ಕಲ್ ತೆಗೆದುಕೊಡು, ನಾನು ಹೋಗುತ್ತೇನೆ ' ಎಂದು ಹೇಳಿದನು. ಗಾಡಿಯವನು ಇಳಿದು ಬೈಸ್ಕಲ್ ತೆಗೆದುಕೊಟ್ಟನು. ' ನಿನ್ನ ಹೆಸರೇನಪ್ಪ ?' ಎಂದು ಕೇಳುತ್ತ ರಂಗಣ್ಣ ಒಳ ಜೇಬಿನಿಂದ ಎಂಟಾಣೆಯನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡನು.

'ನನ್ನೆಸರು ಕರಿಹೈದ ಸೋಮಿ.'

ರಂಗಣ್ಣನು ಎಂಟಾಣೆ ಯನ್ನು ಕೊಡುವುದಕ್ಕೆ ಹೋದರೆ, ಕರಿಹೈದ ತೆಗೆದುಕೊಳ್ಳಲಿಲ್ಲ.