ಪುಟ:ರಂಗಣ್ಣನ ಕನಸಿನ ದಿನಗಳು.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟು ರಂಗಪ್ಪ

೩೯

ಇದ್ದಾಗ, 'ನೀವು ಇದೇ ಊರಿನ ವಾಸಸ್ಥರೋ ಹೇಗೆ ? ' ಎಂದು ರಂಗಣ್ಣ ಕೇಳಿದನು.

'ಇಲ್ಲ ಸ್ವಾಮಿ ! ಇಲ್ಲಿಗೆ ಮೂರು ಮೈಲಿ ನಾನಿರುವ ಹಳ್ಳಿ. ಗುಂಡೇನಹಳ್ಳಿಯಲ್ಲಿ ನಾನಿರುವುದು.'

'ಬಹಳ ಸಂತೋಷ ! ನಿಮ್ಮ ಪರಿಚಯವಾದದ್ದು ನನಗೊಂದು ಲಾಭ, ನಿಮ್ಮಂಥ ಮುಖಂಡರ ಸಹಕಾರ ಸಹಾಯ ನನಗೆ ಆವಶ್ಯಕವಾಗಿ ಬೇಕಾಗಿದೆ. ಆ ಹಳ್ಳಿಯಲ್ಲಿ ಒಂದು ಸ್ಕೂಲಿದೆ. ನೀವು ನೋಡಿರ ಬಹುದು. ಅದರ ವಿಚಾರದಲ್ಲಿ ಆಸಕ್ತಿಯನ್ನೂ ತೋರಿಸುತ್ತಿರಬಹುದು. ಆ ಸ್ಕೂಲು ಚೆನ್ನಾಗಿ ನಡೆಯುತ್ತಿದೆಯೇ? ಮೇಷ್ಟು ಸರಿಯಾಗಿ ಪಾಠಶಾಲೆಗೆ ಬರುತ್ತಿದ್ದಾರೆಯೆ ?

'ನಾನೇ ಸ್ವಾಮಿ ಆ ಸ್ಕೂಲಿನ ಮೇಷ್ಟು ರಂಗಪ್ಪ !'

ಆಗ ರಂಗಣ್ಣನ ಮುಖವನ್ನು ಯಾರಾದರೂ ಫೋಟೋ ತೆಗೆಯಬೇಕಾಗಿತ್ತು ! ರಂಗಣ್ಣನು ಕಷ್ಟದಿಂದ ತನ್ನ ವಿಷಾದವನ್ನು ಅಡಗಿಸಿಕೊಂಡನು. ಇನ್ನೊಂದು ವಿಧದಲ್ಲಿಯೂ ಅವನಿಗೆ ಮುಖಭಂಗವಾಯಿತು. ತನ್ನ ಕೈ ಕೆಳಗಿನ ಉಪಾಧ್ಯಾಯರಲ್ಲಿ ಸಹ ನೆಮ್ಮದಿ ಕುಳ ಇದ್ದಾರೆ ; ಭಾರಿ ಸರಿಗೆ ಪಂಚೆ, ಭಾರಿ ಸರಿಗೆ ರುಮಾಲು ಧರಿಸಿಕೊಳ್ಳುವವರು ಇದ್ದಾರೆ. ಠೀಕಾದ ಉಡುಪನ್ನು ಧರಿಸುವವನು ತಾನೊಬ್ಬನೇ ಅಲ್ಲ - ಎಂದು ತಿಳಿವಳಿಕೆ ಬಂದು ಹೆಮ್ಮೆ ಮುರಿಯಿತು. ಈ ಮೇಷ್ಟು, ತನ್ನನ್ನು ಹಂಗಿಸುವುದಕ್ಕಾಗಿಯೇ ಹೀಗೆ ಉಡುಪು ಧರಿಸಿ ಬಂದಿರುವನೋ ಏನೋ - ಎಂದು ಅಸಮಾಧಾನವೂ ತಲೆದೋರಿತು. ಆದರೆ ಅವುಗಳಾವುದನ್ನೂ ತೋರ್ಪಡಿಸಿಕೊಳ್ಳದೆ, " ಒಳ್ಳೆಯದು ಮೇಷ್ಟೆ ! ನಾಳೆ ನಿಮ್ಮ ಸ್ಕೂಲಿನ ತನಿಖೆಗೆ ಬರುತ್ತೇವೆ. ನಿಮಗೆ ಗೊತ್ತಿದೆಯೋ ? ಎಂದು ಕೇಳಿದನು.

'ಗೊತ್ತಿದೆ ಸಾರ್ ! ಅದಕ್ಕೋಸ್ಕರವೇ ತಮ್ಮನ್ನು ಕಂಡು ಹೋಗೋಣ ಎಂದು ಬಂದಿದ್ದೇನೆ, ನಾಳೆ ಸ್ವಾಮಿಯವರು ಅಲ್ಲೇ ಮೊಕ್ಕಾಂ ಮಾಡಬೇಕೆಂದು ಗ್ರಾಮಸ್ಥರೆಲ್ಲಾ ಆಶೆ ಪಡುತ್ತಾರೆ.'

'ಮೇಷ್ಟೆ ! ಅಲ್ಲಿ ಮೊಕ್ಕಾಂ ಮಾಡುವುದಕ್ಕಾಗುವುದಿಲ್ಲ. ಮುಂದೆ