ಪುಟ:ರಂಗಣ್ಣನ ಕನಸಿನ ದಿನಗಳು.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟ್ರು ರಂಗಪ್ಪ

೪೧

ಆ ದಿನ ಇನ್ ಸ್ಪೆಕ್ಟರು ಬರುತ್ತಾರೆಂದು ಮಾವಿನೆಲೆಗಳ ತೋರಣವನ್ನೂ ಬಾಳೆಯ ಕಂಬಗಳನ್ನೂ ಕಟ್ಟಡಕ್ಕೆ ಕಟ್ಟಿ ಅಲಂಕಾರ ಮಾಡಿದ್ದರು. ಕಟ್ಟಡದೊಳಕ್ಕೆ ಇನ್‌ಸ್ಪೆಕ್ಟರು ಪ್ರವೇಶಿಸುತ್ತಲೂ ಗಗನವನ್ನು ಭೇದಿಸುವಂತೆ “ನಮಸ್ಕಾರಾ ಸಾರ್' ಎಂಬುದಾಗಿ ಹುಡುಗರು ಕಿರಿಚಿಕೊ೦ಡರು. ರಂಗಣ್ಣ ಪ್ರತಿ ನಮಸ್ಕಾರ ಮಾಡಿ, 'ಹಾಗೆಲ್ಲಾ ಗಟ್ಟಿಯಾಗಿ ಕಿರಿಚಬಾರದು. ಎದ್ದು ನಿಂತುಕೊಂಡು ಮೌನವಾಗಿ ನಮಸ್ಕಾರ ಮಾಡಬೇಕು? ಎಂದು ತಿಳಿಸಿ, “ಮೇಷ್ಟ್ರೇ ! ಈ ವಿಚಾರದಲ್ಲಿ ನಾವು ಸರ್ಕ್ಯುಲರ್ ಕೊಟ್ಟಿದ್ದೆವು. ನೀವು ಹುಡುಗರಿಗೆ ಸರಿಯಾದ ತಿಳಿವಳಿಗೆ ಕೊಡಬೇಕು' ಎಂದು ಹೇಳಿದನು. ಮೇಷ್ಟು ರಂಗಪ್ಪ ಹಿಂದಿನ ದಿನದಂತೆಯೇ ದೊಡ್ಡ ಸರಿಗೆ ರುಮಾಲು ಭಾರಿ ಸರಿಗೆ ಪಂಚೆ ಮತ್ತು ಒಳ್ಳೆಯ ಕೋಟನ್ನು ಧರಿಸಿದ್ದನು. ರಂಗಣ್ಣನಿಗೆ ಆ ಮೇಷ್ಟ ವಿಚಾರದಲ್ಲಿ ಬಹಳ ಗೌರವ, ಸ್ವಲ್ಪ ಭಯ ಹುಟ್ಟಿದುವು. ಆ ವಾಠಶಾಲೆಯಲ್ಲಿ ಮೂರು ತರಗತಿಗಳು ಮಾತ್ರ ಇದ್ದುವು. ಮೊದಲನೆಯ ತರಗತಿಯಲ್ಲಿ ಇಪ್ಪತ್ತು ಮಕ್ಕಳು, ಎರಡನೆಯ ತರಗತಿಯಲ್ಲಿ ನಾಲ್ಕು ಮಕ್ಕಳು ಮತ್ತು ಮೂರನೆಯ ತರಗತಿಯಲ್ಲಿ ಇಬ್ಬರು ಹುಡುಗರು ಇದ್ದರು. ಮೂರನೆಯ ತರಗತಿಯವರಿಗೂ ಎರಡನೆಯ ತರಗತಿಯವರಿಗೂ ಕಪ್ಪು ಹಲಗೆಯ ಮೇಲೆ ಲೆಕ್ಕಗಳನ್ನು ಹಾಕಿ ರಂಗಣ್ಣನು ಮೊದಲನೆಯ ತರಗತಿಯ ಮಕ್ಕಳ ತನಿಖೆಗೆ ಪ್ರಾರಂಭಿಸಿದನು. ಆ ಮಕ್ಕಳಲ್ಲಿ ಹನ್ನೆರಡು ಜನ ಅ, ಆ ಮೊದಲುಗೊಂಡು ಪ ಫ ಬ ಭ ಮ ವರೆಗೆ ಅಕ್ಷರಗಳನ್ನು ಕಲಿತಿದ್ದರು. ಉಳಿದವರಲ್ಲಿ ನಾಲ್ಕು ಮಂದಿ 'ಆಗೋ ಕೋತಿ, ದೋಸೆ ಕೊಡು' ಮುಂತಾದ ಕಾಗುಣಿತದ ಪಾಠಗಳನ್ನು ಮಾಡಿದ್ದರು. ಉಳಿದ ನಾಲ್ಕು ಮಂದಿ ಒತ್ತಕ್ಷರದ ಪಾಠಗಳನ್ನು ಸುಮಾರಾಗಿ ಓದುವವರಾಗಿದ್ದರು, ಈ ನಾಲ್ಕು ಮಂದಿ ಮೂರು ವರ್ಷ ಆ ತರಗತಿಯಲ್ಲೇ ಇದ್ದ ವರು ; ಕಾಗುಣಿತದವರು ಎರಡು ವರ್ಷ ಹಿಂದೆ ಬಿದ್ದಿದ್ದವರು. ಆ ಮಕ್ಕಳಿಂದ ಸ್ವಲ್ಪ ಓದಿಸಿ, ಬರೆಯಿಸಿ ಆಯಿತು. ಕೊಂಚ ಲೆಕ್ಕಗಳನ್ನು ಕೇಳಿ ಆಯಿತು. ಅಕ್ಷರ ಜ್ಞಾನ ತಕ್ಕ ಮಟ್ಟಿಗಿತ್ತು, ಲೆಕ್ಕಗಳಲ್ಲಿ ಹಿಂದೆ ಬಿದ್ದಿದ್ದರು. ಆ ಹುಡುಗರ ಪರೀಕ್ಷೆ ಮುಗಿದಮೇಲೆ ಅವರನ್ನು ಆಟಕ್ಕೆ ಬಿಟ್ಟು ಮೇಲಿನ ತರಗತಿಗಳ ತನಿಖೆಯನ್ನು ರಂಗಣ್ಣನು