ಪುಟ:ರಂಗಣ್ಣನ ಕನಸಿನ ದಿನಗಳು.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೮

ರಂಗಣ್ಣನ ಕನಸಿನ ದಿನಗಳು

ಕೆಲಸಗಳೆಲ್ಲ ನಿಂತು ಹೋಗುವಂತೆ ಮಾಡಿದುದಾಗಿಯೂ ಉಗ್ರಪ್ಪ ಮೇಷ್ಟ ಮೇಲೆ ರೆವಿನ್ಯೂ ಅಧಿಕಾರಿಗಳು ದೂರು ಕೊಟ್ಟಿದ್ದರು. ಡೆಪ್ಯುಟಿ ಕಮೀಷನರ್ ಸಾಹೇಬರನ್ನು ಕಾಣುವುದಕ್ಕಾಗಿ ಗ್ರಾಮಸ್ಥರು ಬ೦ದಿದ್ದರು. ಅವರಲ್ಲಿ ಆ ಮೇಷ್ಟು ಸಹ ಒಬ್ಬನು. ಡೆಪ್ಯುಟಿ ಕಮಿಷನರ್ ಸಾಹೇಬರು ಕೆಲವರು ರೈತರೊಡನೆ ಮಾತನಾಡಿ ಸ್ವಲ್ಪ ಸಮಾಧಾನ ಮಾಡಿದನಂತರ ಮೇಷ್ಟ್ರನ್ನು ಕರೆದು, " ಏನು ? ನೀನು ಬಹಳ ತುಂಟಾಟ ಮಾಡುತ್ತಿದ್ದೀಯಂತೆ ? ಎಚ್ಚರಿಕೆ ಇರಲಿ ; ಪೊಲೀಸ್ ಲಾಕಪ್ ರುಚಿ ತೋರಿಸಬೇಕಾದೀತು. ನೀನು ಸರ್ಕಾರಿ ನೌಕರ, ಹದಿನೈದು ರೂಪಾಯಿ ಮೇಷ್ಟು, ಸುಮ್ಮನೆ ಪಾಠ ಹೇಳಿಕೊಂಡಿರಬೇಕು. ಗೊತ್ತಿದೆಯೋ ? ಹುಷಾರ್ ' ಎಂದು ಜಬರ್ದಸ್ತಿ ಮಾಡಿದರು.

ಅದಕ್ಕೆ ಆ ಸಿಪಾಯಿ ಮೇಷ್ಟ್ರು, ' ಸ್ವಾಮಿ, ತಾವು ದೊಡ್ಡ ಮನುಷ್ಯರು, ದೊಡ್ಡ ಅಧಿಕಾರದಲ್ಲಿರತಕ್ಕವರು, ಡಿಸ್ಟ್ಟಿಕ್ಟ್ ಮ್ಯಾಜಿಸ್ಟ್ರೇಟರು, ನಾನು ಹದಿನೈದು ರೂಪಾಯಿ ಸಂಬಳದ ಬಡ ನೌಕರ. ತಮ್ಮ ದಫೇದಾರನಿಗೆ ಹೆಚ್ಚು ಸಂಬಳ ಬರುತ್ತಿರಬಹುದು. ಆದರೆ ಗೌರವದ ವಿಚಾರದಲ್ಲಿ ಮೇಷ್ಟಾದ ನಾನು ತಮಗೆ ಪಾಠ ಕಲಿಸಬೇಕಾಗಿದೆ. ಮರ್ಯಾದೆ ಕೊಟ್ಟು ಮರ್ಯಾದೆ ಪಡೆಯಬೇಕು ಎಂಬುದೊಂದು ನೀತಿ. ತಾವು ನನ್ನನ್ನು ಏಕವಚನದಲ್ಲಿ ಸಂಬೋಧಿಸಿದರೆ ನಾನು ಸಹ ತಮ್ಮನ್ನು ಏಕವಚನದಲ್ಲಿಯೇ ಸಂಬೋಧಿಸಬೇಕಾಗುತ್ತದೆ - ಎಂದು ಉತ್ತರ ಕೊಟ್ಟನು.

'ಏನ್ರಿ ! ಬಹಳ ಜೋರ್ ಮೇಲೆ ಇದ್ದೀರಿ. ನಾಳೆ ನಿಮ್ಮನ್ನು ಈ ಸ್ಥಳದಿಂದ ಮಲೆನಾಡಿಗೆ ವರ್ಗ ಮಾಡಿಸುತ್ತೇನೆ. ತಿಳಿಯಿತೋ ?'

'ಒಳ್ಳೆಯದು ಸ್ವಾಮಿ ! ಇಲ್ಲಿಗೆ ನಾನು ಬಂದಿರುವುದು ಮೇಷ್ಟರಾಗಲ್ಲ. ಅದು ತಮಗೆ ತಿಳಿಯಬೇಕು. ನಾನು ಕಂದಾಯ ಕಟ್ಟುವ ರೈತ. ವರ್ಷಕ್ಕೆ ಐವತ್ತು ರೂಪಾಯಿ ಕಂದಾಯ ಕಟ್ಟುತ್ತೇನೆ. ನಾನು ಶ್ರೀಮನ್ಮಹಾರಾಜರವರ ಪ್ರಜೆ ; ತಮ್ಮ ಸಂಬಳ ಕೊಡುತ್ತಿರುವ ರೈತ. ನೇಮಕರಾಗಿರುವುದು ನಮ್ಮ ಸೇವೆ ಮಾಡುವುದಕ್ಕೆ, ನಾವು ಧಣಿಗಳು, ನೀವು ಸೇವಕರು. ತಿಳಿಯಿತೋ ? ನನ್ನನ್ನು ವರ್ಗ ಮಾಡಿಸುತ್ತಿರಾ